ಮೈಸೂರು: ಪ್ರತ್ಯೇಕ ಪ್ರಕರಣದಲ್ಲಿ ರೈತರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಹೊಸೂರು ಕೊಡಗು ಕಾಲೋನಿಯ ಗಣೇಶ್‌ರ ಪುತ್ರ ಶ್ರೀಧರ್(30) ಹಾಗೂ ಹನಗೋಡು ಹೋಬಳಿಯ ಕಾಳಬೂಚನಹಳ್ಳಿಯ ದಿ.ರಾಮನಾಯ್ಕ ಪುತ್ರ ಮಹದೇವನಾಯ್ಕ(34) ಆತ್ಮಹತ್ಯೆಗೆ ಶರಣಾದವರು.
ಹೊಸೂರು ಕೊಡಗು ಕಾಲೋನಿಯ ಶ್ರೀಧರ್‌ಗೆ ಗ್ರಾಮದಲ್ಲಿ 5.8 ಎಕರೆ ಜಮೀನಿದ್ದು ತಂಬಾಕು, ಶುಂಠಿ ಮತ್ತಿತರ ಬೆಳೆ ಬೆಳೆಯುತ್ತಿದ್ದರು. ಗುರುಪುರ SBI ಬ್ಯಾಂಕ್‌ನಲ್ಲಿ 1 ಲಕ್ಷ ಹಾಗೂ ಮಹಿಳಾ ಸಂಘ ಮತ್ತಿತರ ಸ್ನೇಹಿತರಿಂದ ಪಡೆದಿದ್ದ 3 ಲಕ್ಷ ಕೈಸಾಲ ಸೇರಿದಂತೆ ಒಟ್ಟು 4 ಲಕ್ಷ ಸಾಲ ಮಾಡಿಕೊಂಡಿದ್ದರಂತೆ. ಈ ಸಾಲ ತೀರಿಸಲಾಗದೆ ಕ್ರಿಮಿನಾಶಕ ಸೇವಿಸಿ ಸಾವಿನ ಹಾದಿ ತುಳಿದಿದ್ದಾರೆ. ಇವರಿಗೆ ಪತ್ನಿ, ಒಬ್ಬ ಮಗನಿದ್ದಾನೆ. ಈ ಬಗ್ಗೆ ತಂದೆ ಗಣೇಶ್ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಹನಗೋಡು ಹೋಬಳಿಯ ಕಾಳಬೂಚನಹಳ್ಳಿಯ ಮಹದೇವನಾಯ್ಕ್ ತಮ್ಮ ತಾಯಿ ತಿಮ್ಮಮ್ಮನವರ ಹೆಸರಿನಲ್ಲಿ 3 ಎಕರೆ ಜಮೀನಿದ್ದು ಇದರಲ್ಲಿ ತಂಬಾಕು, ಶುಂಠಿ, ಜೋಳ ಬೆಳೆಯುತ್ತಿದ್ದರು. ಹುಣಸೂರಿನ ಕರ್ನಾಟಕ ಕಲ್ಪತರು ಬ್ಯಾಂಕ್‌ನಲ್ಲಿ ಮಹದೇವ ನಾಯ್ಕ್, ಪ್ರತಿವರ್ಷ 4.5 ಲಕ್ಷರೂ ಸಾಲ ಪಡೆದು ಮರುಪಾವತಿ ಮಾಡಿಕೊಂಡು ಬರುತ್ತಿದ್ದರಂತೆ. ಕಳೆದ ವರ್ಷ ಪಡೆದಿದ್ದ 4.5 ಲಕ್ಷರೂಗಳಲ್ಲಿ ಒಂದೂವರೆ ಲಕ್ಷ ಮಾತ್ರ ತೀರಿಸಿದ್ದು, 3 ಲಕ್ಷರೂ ಸಾಲ ತೀರಿಸಬೇಕಿದೆ.
ಈ ಬಾರಿ ತಂಬಾಕು ಬೆಲೆ ಇಲ್ಲದೆ, ಶುಂಠಿಯೂ ಕೈಕೊಟ್ಟಿದ್ದರಿಂದ ಸಾಲ ತೀರಿಸಲಾಗದೆ ಉಡುವೆಪುರ ಬಳಿಯ ಚಂದ್ರಶೇಖರ್ ಎಂಬುವವರ ಜಮೀನಿನ ಕೃಷಿಹೊಂಡಕ್ಕೆ ಬಿದ್ದು ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪತ್ನಿ ರೇಖಾ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವರಿಗೆ ಒಬ್ಬಳು ಮಗಳಿದ್ದಾಳೆ.
ಇದನ್ನೂ ಓದಿ : 130 ರೂಪಾಯಿ ಆಸೆ ತೋರಿಸಿ 1 ಲಕ್ಷ ದೋಚಿದ ಐನಾತಿ ಕಳ್ಳರು