ಮೈಸೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನು ಆರು ತಿಂಗಳು ನಿರ್ವಹಣೆ ಮಾಡಲಿಲ್ಲ. ಅವನೇನು ಮೈತ್ರಿ ಸರ್ಕಾರದ ಬಗ್ಗೆ ಮಾತನಾಡೋದು ಎಂದು ಶಾಸಕ ಹೆಚ್. ವಿಶ್ವನಾಥ್ ವಿರುದ್ಧ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಏಕವನಚನದಲ್ಲೇ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಸಮನ್ವಯತೆ ಸಾಧಿಸುವಲ್ಲಿ ಸಿದ್ದರಾಮಯ್ಯ-ಕುಮಾರಸ್ವಾಮಿ ವಿಫಲರಾಗಿದ್ದಾರೆ ಎಂಬ ವಿಶ್ವನಾಥ್ ಅವರ ಆರೋಪದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಮೈತ್ರಿ ಸರ್ಕಾರ ಸುಭದ್ರವಾಗಿರೋದರಿಂದಲೇ ನಡೆದುಕೊಂಡು ಹೋಗುತ್ತಿದೆ ಎಂದರು.
ಇನ್ನು ಬಿಜೆಪಿಯವರು ಆಪರೇಷನ್ ಕಮಲ ಮಾಡ್ತಿರೋದು ನಿಜ. ಜೆಡಿಎಸ್-ಕಾಂಗ್ರೆಸ್ ಶಾಸಕರಿಗೆ ಕೋಟಿ ಕೋಟಿ ಆಫರ್ ಮಾಡಿರುವುದು ಸತ್ಯ. ಆದರೆ, ಪಿರಿಯಾಪಟ್ಟಣದ ಶಾಸಕ ಕೆ. ಮಹದೇವು ಅವರಿಗೆ ಬಿಜೆಪಿ 30 ಕೋಟಿ ರೂಪಾಯಿ ಆಫರ್ ಕೊಟ್ಟ ವಿಚಾರ ನನಗೆ ಸರಿಯಾಗಿ ಗೊತ್ತಿಲ್ಲ. ಬಿಜೆಪಿಯವರು ಶಾಸಕರನ್ನು ದುಡ್ಡು ಕೊಟ್ಟು ಖರೀದಿಸುತ್ತಿರುವ ಪ್ರಯತ್ನ ವಿಫಲವಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.