ಮೈಸೂರು : ಹೆಚ್ ಡಿ ಕೋಟೆ ತಾಲೂಕಿನ ಕಬಿನಿ ಹಿನ್ನೀರಿನ ಕಾಕನಕೋಟೆ ಸಫಾರಿ ವಲಯದಲ್ಲಿ ಖಾಸಗಿ ರೆಸಾರ್ಟ್‌ಗಳ ಸಫಾರಿ ವಾಹನಗಳ ಅತೀರೇಖದ ವರ್ತನೆಗಳಿಂದ ಕಾಡು ಪ್ರಾಣಿಗಳಿಗೆ ಕಿರಿಕಿರಿಯಾಗುತ್ತಿರುವ ಬಗ್ಗೆ ಜೊತೆಗೆ ಸರ್ಕಾರಿ ಸಫಾರಿ ವಾಹನಗಳಿಗೂ ತೊಂದರೆ ಉಂಟಾಗುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಫಾರಿಯ ವೇಳೆ ನೀರಿನಲ್ಲಿ ಮಲಗಿದ್ದ ಹುಲಿಯನ್ನು ನೋಡಲು ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‌ನ ವಾಹನಗಳು ಕೆರೆಯ ಸುತ್ತ ಸುತ್ತುವರೆದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ವನ್ಯಜೀವಿ ಪ್ರಿಯರು ಪ್ರಾಣಿಗಳ ಸ್ವತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಾಕನಕೋಟೆಯಲ್ಲಿ ಶನಿವಾರದ ಸಫಾರಿಯ ವೇಳೆ ಕೆರೆಯೊಂದರಲ್ಲಿ ಹುಲಿ ಮಲಗಿರುವ ದೃಶ್ಯ ಕಂಡು ಬಂದಿತ್ತು. ಈ ವೇಳೆ ಕೆರೆಯತ್ತ ಧಾವಿಸಿದ ಜಂಗಲ್ ಲಾಡ್ಜ್‌ನ ಸಫಾರಿ ವಾಹನಗಳು ಕೆರೆಯ ಬಳಿ ಸಫಾರಿ ನಿಯಮಗಳನ್ನು ಗಾಳಿಗೆ ತೂರಿ ಅಡ್ಡಾದಿಡ್ಡಿಯಾಗಿ ಕೆರೆಯ ಸುತ್ತ ವಾಹನಗಳನ್ನು ನಿಲ್ಲಿಸಿದ್ದಾರೆ.
ಈ ವೇಳೆ ದಮ್ಮನಕಟ್ಟೆಯ ಸಫಾರಿ ವಾಹನದಲ್ಲಿದ್ದ ಪ್ರವಾಸಿಗರಲ್ಲೊಬ್ಬ,"ಸ್ವಲ್ಪ ವಾಹನವನ್ನು ಹಿಂದೆ ತೆಗೆಯಲು ಹೇಳಿ, ನಾವು ಸಹ ನೋಡಲು ತಾನೆ ಬಂದಿರುವುದು. ನೀವು ಹೀಗೆ ಹಾಕಿದರೆ ನಮಗೆ ಹೇಗೆ ಕಾಣಿಸಬೇಕು" ಎಂದು ಜಂಗಲ್ ಲಾಡ್ಜ್ ರೆಸಾರ್ಟ್‌ನ ಚಾಲಕರನ್ನು ಪ್ರಶ್ನಿಸಿದ್ದಾರೆ. ಬಳಿಕ ದಮ್ಮನಕಟ್ಟೆ ವಾಹನಗಳಿಗೆ ಸ್ವಲ್ಪ ಜಾಗ ಬಿಟ್ಟಿದ್ದಾರೆ ಎನ್ನಲಾಗಿದೆ.
ಎಲ್ಲಾ ಸಫಾರಿ ವಾಹನಗಳಿಗೆ ಜಿಪಿಎಸ್ ಅಳವಡಿಸಿದ್ದರೂ ರೂಲ್ಸ್ ಬ್ರೇಕ್ ಮಾಡುತ್ತಿರುವುದು ಸಾಮಾನ್ಯವಾಗಿದೆ. ಇತ್ತೀಚಿಗೆ ಕಾಕನಕೋಟೆಯ ಎಲ್ಲಾ ಸಫಾರಿ ವಾಹನಗಳಿಗೂ ಜಿಪಿಎಸ್ ಅಳವಡಿಸಿ ವೇಗ ಹಾಗೂ ರಸ್ತೆ ಬಿಟ್ಟು ಕೆಳಗಿಳಿಯದಂತೆ ನಿಯಮಗಳನ್ನು ರೂಪಿಸಲಾಗಿತ್ತು. ಆದರೆ, ಈ ನಿಯಮವನ್ನು ದಮ್ಮನಕಟ್ಟೆಯ ಸಫಾರಿ ವಾಹನಗಳು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ಜಂಗಲ್ ಲಾಡ್ಜ್ ರೆಸಾರ್ಟ್ ವಾಹನಗಳು ಗಾಳಿಗೆ ತೂರಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.