ಮೈಸೂರು: ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯ ರೈತ ಸಭಾಂಗಣದಲ್ಲಿ ತಂಬಾಕು ಬೆಳೆಗಾರರು ಮತ್ತು ಖರೀದಿದಾರರ ಸಂವಾದ ಸಭೆ ಆಯೋಜಿಸಲಾಗಿತ್ತು.
ಪಿರಿಯಾಪಟ್ಟಣ ರೈತ ಸಭಾಂಗಣದಲ್ಲಿ ತಂಬಾಕು ಬೆಳೆಗಾರರು, ಖರೀದಿದಾರರ ಸಂವಾದ ಸಭೆ ಸಭೆಯಲ್ಲಿ ಮಾತನಾಡಿದ ಶಾಸಕ ಕೆ.ಮಹದೇವ್, ಪಿರಿಯಾಪಟ್ಟಣ ಮಳೆ ಆಶ್ರಿತ ಪ್ರದೇಶವಾಗಿದೆ. ಇಲ್ಲಿನ ರೈತರು ಶುಂಠಿ ಮತ್ತು ಜೋಳ ಬೆಳೆಯುತ್ತಾರೆ. ಜೊತೆಗೆ ಲಕ್ಷಾಂತರ ರೈತರು ತಂಬಾಕು ಬೆಳೆ ಅವಲಂಭಿಸಿ ಜೀವನ ನಡೆಸುತ್ತಿದ್ದಾರೆ. ಆದರೆ ಇದೀಗ ತಂಬಾಕು ಬೆಳೆಗಾರರಿಗೆ ಸರಿಯಾದ ದರ ಸಿಗದೇ ನಷ್ಟ ಅನುಭವಿಸುತ್ತಿದ್ದಾರೆ. ತಂಬಾಕು ಬೆಳೆಗಾರರು ಉತ್ಕೃಷ್ಟವಾದ ತಂಬಾಕನ್ನು ಬೆಳೆದರೆ, ಅವರಿಗೆ ಉತ್ತಮ ದರ ಸಿಗುತ್ತದೆ ಎಂದು ನೀವು ಭರವಸೆ ನೀಡಿದ್ದೀರಿ. ಹೀಗಾಗಿ ತಂಬಾಕನ್ನು ನೀವು ಹೆಚ್ಚಿನ ದರ ನೀಡಿ ಖರೀದಿ ಮಾಡಬೇಕಾಗುತ್ತದೆ ಎಂದು ಐಟಿಸಿ ಹಾಗೂ ಇತರೆ ಕಂಪನಿಯವರಿಗೆ ಒತ್ತಾಯಿಸಿದರು.ತಂಬಾಕು ಮಂಡಳಿಯವರು ರೈತರಿಗೆ ವರ್ಷದಲ್ಲಿ ಇಂತಿಷ್ಟೇ ತಂಬಾಕು ಬೆಳೆಯಬೇಕು ಎಂದು ನಿಗದಿ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ನಷ್ಟ ಅನುಭವಿಸುವುದು ತಪ್ಪುತ್ತದೆ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ತಂಬಾಕು ಬೆಳೆಗಾರರ ಸಮಸ್ಯೆಯನ್ನು ವಿಧಾನಸಭೆಯಲ್ಲಿ ಚರ್ಚಿಸುತ್ತೇನೆ. ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ನಾವು ನಿರ್ಧಾರ ತೆಗೆದುಕೊಳ್ಳಬೇಕು. ನಾನು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿ, ನೇರವಾಗಿ ಸರ್ಕಾರವೇ ತಂಬಾಕನ್ನು ಖರೀದಿ ಮಾಡಬೇಕು ಹಾಗೂ ಬೆಂಬಲ ಬೆಲೆ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.