ಮೈಸೂರು: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮಂಡಿಸುವ ಬಜೆಟ್ಗೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಕೈಗಾರಿಕೆ, ಕೃಷಿ ವಲಯ, ಶಿಕ್ಷಣ, ಸರ್ಕಾರಿ ನೌಕರರು, ಕಾರ್ಮಿಕರು ಹೀಗೆ ಅಭಿವೃದ್ಧಿಯ ವಲಯಗಳು ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿವೆ. ಬಜೆಟ್ನಲ್ಲಿ ಅವಕಾಶಗಳು ಸಿಗುತ್ತವೆ ಎಂಬ ನಿರೀಕ್ಷೆಯಲ್ಲಿ ಈಗ ಜನ ಕಾಯತೊಡಗಿದ್ದಾರೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಮಾರ್ಚ್ 5 ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಎಲ್ಲ ವಲಯಗಳು ನಿರೀಕ್ಷೆ ಇಟ್ಟುಕೊಂಡಂತೆ ಮಹಿಳಾ ಕೈಗಾರಿಕೋದ್ಯಮಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರಾಜ್ಯದಲ್ಲಿ 'ಮಹಿಳಾ ಟೆಕ್ ಪಾರ್ಕ್' ಮಾಡಿ ಅದಕ್ಕೆ ಪೂರಕ ವಾತಾವರಣ ನಿರ್ಮಿಸಿ ಮಹಿಳೆಯರೇ ಕೈಗಾರಿಕೆ ಸ್ಥಾಪನೆ ಮಾಡಿ ಉದ್ಯೋಗದಾತರಾಗಬೇಕು ಎನ್ನುವ ಉದ್ದೇಶವನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದರು. ಆದರೆ, ಈವರೆಗೆ ಕೂಡ ಮಹಿಳಾ ಟೆಕ್ ಪಾರ್ಕ್ ಅಭಿವೃದ್ಧಿಯಾಗಲಿಲ್ಲ.
ಹೆಬ್ಬಾಳು, ನಂಜನಗೂಡು,ಕಲ್ಲಹಳ್ಳಿ, ಹಿಮ್ಮಾವು, ಅಡನಹಳ್ಳಿ ಹೀಗೆ ಮೈಸೂರಿನ ಕೈಗಾರಿಕಾ ಪ್ರದೇಶಗಳಲ್ಲಿ ಮಹಿಳೆಯರು ಉದ್ಯೋಗ ಸ್ಥಾಪನೆ ಮಾಡಲೆಂದು ಸಬ್ಸಿಡಿ ದರದಲ್ಲಿ ಕೈಗಾರಿಕೆ ನಿವೇಶವನ್ನು ನೀಡಲಾಯಿತು. ಆದರೆ, ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ಯಾವ ಮಹಿಳಾ ಉದ್ದಿಮೆಗಳು ಕೈಗಾರಿಕೆ ಸ್ಥಾಪನೆ ಮಾಡಲು ಇತ್ತ ಸುಳಿದಿಲ್ಲ. ಇದರಿಂದ ನಿವೇಶನಗಳು ಖಾಲಿಯಾಗಿ ಬಿದ್ದಿವೆ.
ಮಹಿಳಾ ಟೆಕ್ ಪಾರ್ಕ್ ಯೋಜನೆಯಡಿ ಕೈಗಾರಿಕೆ ಸ್ಥಾಪನೆ ಮಾಡಲು ಉತ್ಸುಕರಾಗಿರುವ ಮಹಿಳಾ ಉದ್ಯಮಿಗಳಿಗೆ ಮೂಲ ಸೌಲಭ್ಯ ಕೊಟ್ಟರೆ, ಖಂಡಿತವಾಗಿಯೂ ಮಹಿಳೆಯರು ಮುಂದೆ ಬರುತ್ತಾರೆ. ಹಾಗಾಗಿ ಮಾರ್ಚ್ 5ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಲಿರುವ ಬಜೆಟ್, ಮಹಿಳಾ ಕೈಗಾರಿಕೋದ್ಯಮಿಗಳಿಗೆ ಎಷ್ಟರ ಮಟ್ಟಿಗೆ ಸಿಹಿಯಾಗಲಿದೆ ಎಂದು ಕಾದು ನೋಡಬೇಕಿದೆ.