ಮೈಸೂರು : ಕೊಲೆ ಪ್ರಕರಣವೊಂದರಲ್ಲಿ ಜೈಲಿನಿಂದ ಬಿಡುಗಡೆಯಾಗಿ ಬಂದು ಬಳಿಕ ಟಿಕ್ ಟಾಕ್ ನಲ್ಲಿ ಫೇಮಸ್ ಆಗಿದ್ದ ಬೆಂಗಳೂರಿನ ಸ್ಮೈಲ್ ನವೀನ್ ಎಂಬಾತನನ್ನು ಮೈಸೂರಿನಲ್ಲಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ನಂಜನಗೂಡು ಪೊಲೀಸರು 8 ಜನ ಆರೋಪಿಗಳನನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
ಆ. 27 ರ ರಾತ್ರಿ ಮೈಸೂರಿನ ಅರಮನೆಯ ಮುಂಭಾಗ ಇರುವ ವರಾಹ ಗೇಟ್ ಬಳಿ ಯುವತಿಯರೊಂದಿಗೆ ರೀಲ್ಸ್ ಮಾಡುತ್ತಿದ್ದಾಗಲೇ ನವೀನ್ನನ್ನು ಎರಡು ಕಾರುಗಳಲ್ಲಿ ಬಂದ ಅಪರಿಚಿತರು ಅಪಹರಣ ಮಾಡಿದ್ದರು. ಕಾರಿನಲ್ಲೇ ಕೊಲೆ ಮಾಡಿ ಶವವನ್ನು ನಂಜನಗೂಡಿನ ಗೋಳೂರು ಬಳಿಯ ನಾಲೆಗೆ ಬಿಸಾಕಿ ಪರಾರಿಯಾಗಿದ್ದರು. ಈ ಬಗ್ಗೆ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ ಎಂದು ದಾಖಲಾಗಿತ್ತು. ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿ 8 ಮಂದಿ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ಹತ್ಯೆಯ ರಿವೆಂಜ್ಗಾಗಿ ನವೀನ್ ಕೊಲೆ ಶಂಕೆ : ಬಿಬಿಎಂಪಿಯ ಕಾರ್ಪೊರೇಟರ್ವೊಬ್ಬರ ಅಣ್ಣನ ಮಗನನ್ನು 2020 ರ ಜುಲೈನಲ್ಲಿ 13 ಜನರ ತಂಡ ಕಗ್ಗಲಿಪುರ ಠಾಣಾ ವ್ಯಾಪ್ತಿಯಲ್ಲಿ ಬರ್ಬರವಾಗಿ ಕೊಲೆ ಮಾಡಿತ್ತು. ಈ ಪ್ರಕರಣದಲ್ಲಿ ನಾಲ್ವರು ಸ್ನೇಹಿತರೊಂದಿಗೆ ಸ್ಮೈಲ್ ನವೀನ್ ಪೊಲೀಸರಿಗೆ ಶರಣಾಗಿದ್ದ. ಬಳಿಕ ಇತ್ತೀಚೆಗೆ ಜೈಲಿನಿಂದ ಬಿಡುಗಡೆ ಆಗಿದ್ದು, ಟಿಕ್ ಟಾಕ್ ಹಾಗೂ ರೀಲ್ಸ್ ಗಳಿಂದ ಜಾಲತಾಣಗಳಲ್ಲಿ ಫೇಮಸ್ ಆಗಿದ್ದ. ಇದೀಗ ಈ ಕೊಲೆ ನಡೆದಿರುವುದು ರಿವೆಂಜ್ಗಾಗಿ ಎಂಬುದನ್ನು ಪೊಲೀಸರ ತನಿಖೆಯಲ್ಲಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಘಟನೆ ನಡೆದ ದಿನ ಅರಮನೆ ಮುಂಭಾಗದಲ್ಲಿ ಗೈಡ್ ಚಂದ್ರು ಎಂಬುವರು ಈ ಬಗ್ಗೆ ನಗರದ ಕೆ ಆರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಮೃತದೇಹ ನಂಜನಗೂಡಿನ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಸಿಕ್ಕಿರುವುದರಿಂದ ಪ್ರಕರಣದ ತನಿಖೆ ಎಲ್ಲಿ ನಡೆಯಬೇಕೆಂಬ ಬಗ್ಗೆ ಗೊಂದಲ ಉಂಟಾಗಿತ್ತು. ಸದ್ಯ ಆರೋಪಿಗಳನ್ನು ಬಂಧಿಸಿರುವ ನಂಜನಗೂಡು ಗ್ರಾಮಾಂತರ ಪೊಲೀಸರು, ಪ್ರಕರಣವನ್ನು ನಗರದ ಕೆ ಆರ್ ಠಾಣೆಗೆ ವರ್ಗಾಯಿಸುವ ಸಾಧ್ಯತೆ ಇದೆ. ನಗರ ಪೊಲೀಸ್ ಕಮಿಷನರ್ ಅವರನ್ನು ಈಟಿವಿ ಭಾರತ ಸಂಪರ್ಕಿಸಿದಾಗ, ಈ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪ್ರತ್ಯೇಕ ಪ್ರಕರಣ- ಕಲ್ಲಿನಿಂದ ಜಜ್ಜಿ ಯುವಕನ ಕೊಲೆ : ಮೊಬೈಲ್ನಲ್ಲಿ ಮಾತನಾಡುತ್ತ ಹೋಗುತ್ತಿದ್ದ ಯುವಕನ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಶಿವಬಸವ ನಗರದ ರಸ್ತೆಯಲ್ಲಿ ನಡೆದಿತ್ತು. ಆ. 30ರ ಬುಧವಾರ ರಾತ್ರಿ 9 ಗಂಟೆ ಸಂದರ್ಭದಲ್ಲಿ ಬೈಕ್ ಮೇಲೆ ಬಂದಿದ್ದ ಆರೋಪಿಗಳು ಹಿಂದಿನಿಂದ ಹೋಗಿ ಯುವಕನನ್ನು ಕೊಲೆ ಮಾಡಿದ್ದರು. ಭೀಕರವಾಗಿ ಕೊಲೆ ಮಾಡುವ ದೃಶೃ ಕೂಡ ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿನ ಸೆರೆಯಾಗಿತ್ತು. ಬೆಳಗಾವಿಯ ರಾಮನಗರದ ವಡ್ಡರವಾಡಿಯ ನಿವಾಸಿ ನಾಗರಾಜ ಗಾಡಿವಡ್ಡರ(26) ಹತ್ಯೆಗೀಡಾದ ಯುವಕ. ಮಾಳಮಾರುತಿ ಠಾಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಮೈಸೂರಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣ: ಡೆತ್ ನೋಟ್ ಆಧರಿಸಿ ನಾಲ್ವರ ಬಂಧನ