ಮೈಸೂರು: ಹುಲಿ ದಾಳಿಗೆ ಹಸು ಬಲಿಯಾಗಿರುವ ಘಟನೆ ಸರಗೂರು ತಾಲೂಕಿನ ಬಡಗಲಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿಂಗೇಗೌಡ ಎಂಬುವರ ಮನೆಯ ಕೊಟ್ಟಿಗೆಯಲ್ಲಿ ರಾತ್ರಿ ಕಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಹಸುವಿನ ಹಾಲು ಮಾರಿ ಜೀವನ ನಡೆಸುತ್ತಿದ್ದ ರೈತ ಕಂಗಾಲಾಗಿದ್ದಾರೆ. ಅಲ್ಲದೆ ಪರಿಹಾರಕ್ಕಾಗಿ ಅರಣ್ಯ ಇಲಾಖೆಯ ಮೊರೆ ಹೋಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರದ ಭರವಸೆ ನೀಡಿದ್ದಾರೆ.
ತಾಲೂಕಿನ ಕಾಡಂಚಿನ ಗ್ರಾಮವಾದ ಬಡಗಲಪುರ ಗ್ರಾಮದಲ್ಲಿ ಕಳೆದ 3-4 ದಿನಗಳಿಂದ ಹುಲಿ ಹಾವಳಿ ಹೆಚ್ಚಾಗಿದ್ದು, ಕಳೆದ ಗುರುವಾರ ಜಮೀನಿನಲ್ಲಿ ಕಟ್ಟಿಹಾಕಿದ್ದ ಶ್ರೀನಿವಾಸ್ ಎಂಬುವರ ಎರಡು ಎತ್ತುಗಳನ್ನು ಕೊಂದು ಹಾಕಿತ್ತು. ಗ್ರಾಮದಲ್ಲಿ ಹುಲಿ ಹಾವಳಿ ತಪ್ಪಿಸುವಂತೆ ಗ್ರಾಮಸ್ಥರು, ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ದಿನೇ ದಿನೇ ಹುಲಿ ಹಾವಳಿ ಹೆಚ್ಚಾಗುತ್ತಿರುವ ಪರಿಣಾಮ ಸ್ಥಳೀಯರು ಜಮೀನಿಗೆ ಹೋಗಲು ಹೆದರುವಂತಾಗಿದೆ.