ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ವೃದ್ಧಾಪ್ಯದಿಂದ 20 ವರ್ಷ ವಯಸ್ಸಿನ ಬ್ರಹ್ಮ ಎಂಬ ಹುಲಿ ಮೃತಪಟ್ಟಿದೆ.
ಬ್ರಹ್ಮ ಹುಲಿಯನ್ನು 2018ರ ಮಾರ್ಚ್ 18ರಂದು ಕರ್ನಾಟಕ ಅರಣ್ಯ ಇಲಾಖೆಯಿಂದ ಮಾನವ - ಪ್ರಾಣಿ ಸಂಘರ್ಷ ಕಾರ್ಯಾಚರಣೆಯಡಿ ಮಡಿಕೇರಿ ಜಿಲ್ಲೆಯ ವಿರಾಜಪೇಟೆ ತಾಲೂಕಿನ ತೆರಳು ಗ್ರಾಮದಿಂದ ಸೆರೆ ಹಿಡಿದು ರಕ್ಷಿಸಿ ಮೃಗಾಲಯಕ್ಕೆ ತರಲಾಗಿತ್ತು. ಹುಲಿಯನ್ನು ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿತ್ತು.

ಬ್ರಹ್ಮಹುಲಿಯನ್ನು ದಿವಂಗತ ಯೋಗ ಗುರು ಬಿ.ಕೆ.ಎಸ್.ಐಯ್ಯಂಗಾರ್ ಅವರು ಹುಲಿಯ ಜೀವಮಾನ ಪರ್ಯಂತರಕ್ಕೂ ದತ್ತು ಸ್ವೀಕರಿಸಿದ್ದರು. ಶುಕ್ರವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಬ್ರಹ್ಮ ಹುಲಿ ವೃದ್ಧಾಪ್ಯಕ್ಕೆ ಸಂಬಂಧಿಸಿದ ಕಾರಣಗಳ ಹಿನ್ನೆಲೆ ಮೃತಪಟ್ಟಿದೆ.
ಮೈಸೂರು ಮೃಗಾಲಯದಲ್ಲಿ ಇದೀಗ 10 ಗಂಡು, 6 ಹೆಣ್ಣು ಹುಲಿಗಳಿವೆ. ಹುಲಿಯ ಮರಣಕ್ಕೆ ಮೃಗಾಲಯ ಪ್ರಾಧಿಕಾರವು ಸಂತಾಪ ವ್ಯಕ್ತಪಡಿಸಿದೆ ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.