ಮೈಸೂರು: ತೊಂದರೆ ಕೊಟ್ಟು ಓಡಾಡುತ್ತಿದ್ದ ಹುಲಿಯನ್ನು ಸೆರೆ ಹಿಡಿದಿಲ್ಲ ಎಂದು ಕೋಪಗೊಂಡ ನಂಜನಗೂಡು ತಾಲೂಕಿನ ಮಹಾದೇವ ನಗರದ ಕೆಲವರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆಯೇ ಹಲ್ಲೆ ಮಾಡಿದ್ದಾರೆ.
ಏನಿದು ಘಟನೆ?: ನಂಜನಗೂಡು ತಾಲೂಕಿನ ಮಲ್ಕುಂಡಿ ಸಮೀಪದ ಹೆಡಿಯಾಲ ಕುದುರೆಗುಂಡಿ ಹಿನ್ನೀರು ಪ್ರದೇಶದಲ್ಲಿ ರೈತರೊಬ್ಬರು ಜಾನುವಾರುಗಳನ್ನು ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಹುಲಿಯೊಂದು ದಾಳಿ ಮಾಡಿ ಹಸುವನ್ನು ಕೊಂದು ಹಾಕಿತ್ತು. ಹಸುವನ್ನು ರಕ್ಷಿಸಲು ಹೋಗಿದ್ದ ರೈತ ವೀರಭದ್ರ ಭೋವಿ (71) ಅವರ ಮೇಲೂ ದಾಳಿ ನಡೆಸಿ ಗಂಭೀರ ಗಾಯಗೊಳಿಸಿತ್ತು. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಸಿಬ್ಬಂದಿಗಳ ಜೊತೆ ಗ್ರಾಮದ ಕೆಲವರು ಹುಲಿಯನ್ನು ಸೆರೆ ಹಿಡಿಯಬೇಕೆಂದು ಆಗ್ರಹಿಸಿ ಮಾತಿನ ಚಕಮಕಿ ನಡೆಸಿದ್ದಾರೆ. ಅಲ್ಲದೇ ಅರಣ್ಯ ಸಿಬ್ಬಂದಿ ಮಹಾಂತೇಶ್ ಮೇಲೆ ಹಲ್ಲೆ ಮಾಡಿದ್ದಾರೆ.
ಕಳೆದ ವರ್ಷ ಇದೇ ಹಾದನೂರು ಒಡೆಯಪುರದ ಮಹಾದೇವ ಗೌಡ ಎಂಬುವರ ಮೇಲೆ ಹುಲಿ ದಾಳಿ ಮಾಡಿ ಅವರನ್ನು ಬಲಿ ಪಡೆದಿತ್ತು. ಅಂದಿನಿಂದಲೂ ಗ್ರಾಮಸ್ಥರು ಹುಲಿ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಆಗ್ರಹಿಸಿದ್ದರು. ಆದರೆ ಇಲ್ಲಿಯವರೆಗೂ ಅರಣ್ಯಾಧಿಕಾರಿಗಳು ಹುಲಿಯನ್ನು ಸೆರೆ ಹಿಡಿದಿಲ್ಲ ಎಂಬುದೇ ಗ್ರಾಮಸ್ಥರ ದೂರಾಗಿದೆ.
ಇದನ್ನೂ ಓದಿ: ಮೈಸೂರು ಜಿಲ್ಲೆಯಲ್ಲಿ ಮುಂದುವರಿದ ಕಾಡು ಪ್ರಾಣಿಗಳ ಹಾವಳಿ : ಸೌದೆ ತರಲು ಹೋದ ಬಾಲಕ ಹುಲಿ ದಾಳಿಗೆ ಬಲಿ
ಪ್ರತ್ಯೇಕ ಘಟನೆ: ಮತ್ತೊಂದೆಡೆ, ಸೆಪ್ಟೆಂಬರ್ 22ರಂದು ಹುಲಿ ದಾಳಿಗೆ ದನಗಾಹಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಮುದ್ದನಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿತ್ತು. ಗ್ರಾಮದ ನಿವಾಸಿ ರಮೇಶ (40) ಗಾಯಗೊಂಡ ವ್ಯಕ್ತಿ.
ನಾಗರಹೊಳೆ ವನ್ಯಜೀವಿ ವಿಭಾಗದ ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾಡಂಚಿನಲ್ಲಿ ಗ್ರಾಮದ ಹೊರಾವರಣದಲ್ಲಿ ದನ ಮೇಯಿಸಲು ಹೋಗಿದ್ದಾಗ ಹಸುವಿನ ಮೇಲೆ ಹುಲಿ ದಾಳಿ ಮಾಡಿದ ದೃಶ್ಯ ಕಂಡು ರಕ್ಷಿಸಲು ಹೋದ ರೈತನ ಮೇಲೆ ಹುಲಿ ಎರಗಿತ್ತು. ರಮೇಶ್ ಜೋರಾಗಿ ಕಿರುಚಾಡಿದಾಗ, ಅಕ್ಕಪಕ್ಕದಲ್ಲಿ ದನ ಮೇಯಿಸುತ್ತಿದ್ದ ದನಗಾಹಿಗಳು ಹೋಗಿ ಹುಲಿ ಓಡಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದರು.
ಹುಲಿ ದಾಳಿಗೆ ಹಸು ಬಲಿ: ಸೆಪ್ಟೆಂಬರ್ 17ರಂದು ಜಮೀನಿನಲ್ಲಿ ಮೇಯುತ್ತಿದ್ದ ಹಸುಗಳ ಮೇಲೆ ಹುಲಿ ದಾಳಿ ಮಾಡಿದ ಪರಿಣಾಮ, 1 ಹಸು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಂದು ಹಸು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರಿನ ಎಚ್ ಡಿ ಕೋಟೆ ತಾಲೂಕಿನ ಹೊಸ ಹೊಳಲು ಗ್ರಾಮದಲ್ಲಿ ನಡೆದಿತ್ತು. ಹೊಸಹೊಳಲು ಗ್ರಾಮದ ಎಚ್.ಎಸ್ ಲಿಂಗರಾಜು ಎಂಬುವವರಿಗೆ ಸೇರಿದ ಹಸು ಇದಾಗಿತ್ತು. ಹಸುಗಳನ್ನು ಲಿಂಗರಾಜು ಅವರ ಪುತ್ರ ವಿಕಾಸ್ ಮೇಯಿಸುವ ವೇಳೆ ಹುಲಿ ದಾಳಿ ಮಾಡಿತ್ತು. ಈ ವೇಳೆ ಹುಲಿ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಲ್ಲಿ ಗ್ರಾಮಸ್ಥರು ಒತ್ತಾಯಿಸಿದ್ದರು.
ಇದನ್ನೂ ಓದಿ: ಚಾಮರಾಜನಗರದಲ್ಲಿ ಪ್ರತ್ಯೇಕ ಘಟನೆ: ಕಾಡಾನೆ ದಾಳಿಗೆ ಯುವಕ ಸಾವು... ಹುಲಿ ದಾಳಿಗೆ ಮೂರು ಹಸು ಬಲಿ