ಮೈಸೂರು: ಮೂವರು ಸುಲಿಗೆಕೋರರನ್ನು ಬಂಧಿಸಿ, ಅವರಿಂದ 1.80 ಲಕ್ಷ ರೂ. ಮೌಲ್ಯದ ಮೂರು ಬೈಕ್ ಹಾಗೂ ಒಂದು ಬೆಳ್ಳಿ ಚೈನ್‌ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಜಯನಗರದ 2ನೇ ಹಂತದ ನಿವಾಸಿ ಕಾರ್ತಿಕ್(23), ಪಡುವಾರಹಳ್ಳಿ ನಿವಾಸಿ ಆನಂದ್ (22), ಬೆಳವಾಡಿಯ ಅಮೃತೇಶ್ವರನಗರದ ನಿವಾಸಿ ಶಿವಕುಮಾರ್(19) ಬಂಧಿತ ಸುಲಿಗೆಕೋರರು.
ಮಂಜುನಾಥ್ ಎಂಬುವರು ಡಿ.12ರಂದು ಬೆಂಗಳೂರಿನಿಂದ ಮೈಸೂರು ರೈಲ್ವೆ ನಿಲ್ದಾಣಕ್ಕೆ ಬಂದು ಹೊಳೆನರಸೀಪುರಕ್ಕೆ ಹೋಗುವ ರೈಲು ತಡವಾಗುತ್ತಿದ್ದರಿಂದ ಊಟ ಮಾಡುವ ಸಲುವಾಗಿ ದಾಸಪ್ಪ ಸರ್ಕಲ್‌ಗೆ ಬಂದಾಗ, ಪೆಟ್ರೋಲ್ ಬಂಕ್ ಬಳಿ ಇಬ್ಬರು ಅಪರಿಚಿತರು ಮಂಜುನಾಥರವರನ್ನು ತಮ್ಮ ಊರಿನವರಂತೆ ಮಾತನಾಡಿಸಿ ತಾವು ಕೂಡ ಹೊಳೆನರಸೀಪುರದವರು ಎಂದು ಪರಿಚಯ ಮಾಡಿಕೊಂಡು ಮೂತ್ರ ವಿಸರ್ಜನೆ ಮಾಡಿ ಬರುವ ಎಂದು ಹೇಳಿ ದಾಸಪ್ಪ ಸರ್ಕಲ್‌ನ ರೈಲ್ವೆ ಬ್ರೀಡ್ಜ್ ಬಳಿ ಇರುವ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅನಂತರ ಮಂಜುನಾಥ್ ರವರ ಕುತ್ತಿಗೆಯನ್ನು ಅದುಮಿ ಹಿಡಿದುಕೊಂಡು ಮುಖಕ್ಕೆ ಹಲ್ಲೆ ಮಾಡಿ, ಚಾಕು ತೋರಿಸಿ ಹೆದರಿಸಿ, ಜೇಬಿನಲ್ಲಿದ್ದ ರೂ.2400 ರೂಪಾಯಿ ನಗದು ಮತ್ತು ಕತ್ತಿನಲ್ಲಿದ್ದ ಒಂದು ಬೆಳ್ಳಿ ಚೈನ್‌ನ್ನು ಕಿತ್ತುಕೊಂಡು ಹೋಗಿದ್ದರು. ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇನ್ನೂ ತನಿಖೆ ಕೈಗೊಂಡ ದೇವರಾಜ ಪೊಲೀಸರು ಕೃತ್ಯ ನಡೆದಿರುವ ಸ್ಥಳದ ಅಕ್ಕಪಕ್ಕದಲ್ಲಿರುವ ಸಿಸಿಟಿವಿ ಕ್ಯಾಮರಗಳನ್ನು ಪರಿಶೀಲಿಸಿ, ಈ ಇಬ್ಬರು ಆರೋಪಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ. ಆರೋಪಿಗಳು ನಜರ್‌ಬಾದ್ ಠಾಣೆ, ನರಸಿಂಹರಾಜ ಠಾಣೆ ಮತ್ತು ಹುಣಸೂರು ಗ್ರಾಮಾಂತ್ರರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.