ಮೈಸೂರು: ಶ್ರೀಗಂಧ ಮರಗಳ್ಳತನ ಮಾಡಿದ ಆರೋಪದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 4 ಲಕ್ಷ ರೂ. ಮೌಲ್ಯದ 40 ಕೆ.ಜಿ. ಮರದ ತುಂಡುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿದ್ಯಾರಣ್ಯಪುರಂ ನಿವಾಸಿ ಸಂಪತ್ ಕುಮಾರ್ (32), ಬೊಂಬು ಬಜಾರ್ ನಿವಾಸಿ ಪರಶುರಾಂ (38) ಮತ್ತು ಶಾಂತಿನಗರದ ನಿವಾಸಿ ಸೈಯಿದ್ ರಹೀಮ್ (26) ಅವರನ್ನು ಬಂಧಿಸಲಾಗಿದೆ. ಕೆ.ಆರ್. ಠಾಣಾ ವ್ಯಾಪ್ತಿಯ ಗೌರಿಶಂಕರ ನಗರದ ಬಸ್ ನಿಲ್ದಾಣದ ಮುಂಭಾಗ ಕಾರ್ಯಾಚರಣೆ ನಡೆಸಿ, ಎರಡು ಪ್ಲಾಸ್ಟಿಕ್ ಚೀಲಗಳಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ಇಟ್ಟುಕೊಂಡು ನಿಂತಿದ್ದರು. ಈ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದ್ದು, ಮೈಸೂರಿನ ಜೆಎಸ್‌ಎಸ್ ಮಠದ ಅವರಣದಲ್ಲಿ ಶ್ರೀಗಂಧದ ಮರ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಆರೋಪಿಗಳಿಂದ 4 ಲಕ್ಷ ರೂ. ಮೌಲ್ಯದ 40 ಕೆ.ಜಿ. 7 ಶ್ರೀಗಂಧದ ಮರದ ತುಂಡುಗಳು ಹಾಗೂ ತೊಗಟೆ ತೆಗೆದಿದ್ದ ಶ್ರೀಗಂಧದ ಸಣ್ಣ- ಸಣ್ಣ ಚೂರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಳೆಯ ಆರೋಪಿಗಳ ಇವರ ವಿರುದ್ಧ ಮೈಸೂರು ಜಿಲ್ಲೆಯ ಹುಣಸೂರು ಮತ್ತು ಕೊಡಗು ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಶ್ರೀಗಂಧದ ಮರಗಳ ಕಳ್ಳತನ ಪ್ರಕರಣಗಳು ದಾಖಲಾಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.
ನಗರದ ಕೃಷ್ಣರಾಜ ಪೊಲೀಸ್ ಠಾಣೆಯ ಶ್ರೀಗಂಧ ಮರ ಕಳ್ಳತನ ಪ್ರಕರಣ ಸಹ ಬೆಳಕಿಗೆ ಬಂದಿದೆ.