ಮೈಸೂರು: ಮಹಿಳೆಯರು ಗುಂಪಿನಲ್ಲಿರುವಾಗ ಅವರ ಬ್ಯಾಗ್ನಲ್ಲಿದ್ದ ಚಿನ್ನಾಭರಣವನ್ನು ಕದ್ದು ಪರಾರಿಯಾಗುತ್ತಿದ್ದ ಆರೋಪಿಯನ್ನು ಲಷ್ಕರ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮಹಮ್ಮದ್ ಯೂಸಫ್ ಅಲಿಯಾಸ್ ಕೋಳಿಫಯಾಜ್ (25) ನಗರದ ತನ್ವೀರ್ ಸೇಠದ ನಗರದ ನಿವಾಸಿ. ಈತನಿಂದ ಪೊಲೀಸರು 7,53,500 ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಮಹಿಳೆಯೊಬ್ಬರು ಸೀರೆ ಖರೀದಿಸಿಲು ನಗರದ ಸುಮಂಗಲಿ ಬಟ್ಟೆ ಅಂಗಡಿಗೆ ಬಂದ ಸಂದರ್ಭದಲ್ಲಿ ಬ್ಯಾಗ್ನಲ್ಲಿಟ್ಟಿದ್ದ 74 ಗ್ರಾಂ ತೂಕದ ಚಿನ್ನಾಭರಣ ಹಾಗೂ 10 ಸಾವಿರ ನಗದು ಕಳ್ಳತನವಾಗಿತ್ತು. ಆ ಮಹಿಳೆ ಲಷ್ಕರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮಹಮ್ಮದ್ ಯೂಸಫ್ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಈತನೇ ಚಿನ್ನಾಭರಣ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಅರವಿಂದನಗರದಲ್ಲಿ ಮನೆಯೊಂದರ ಬಾಗಿಲು ಮೀಟಿ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿದ್ದ ಹಾಗೂ ರೆಸಿಡೆನ್ಸಿಯೊಂದರಲ್ಲಿ ಹಣದ ಲೆಕ್ಕ ಹಾಕುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ ಮಾಡಿ ಹಣ ದೋಚಲು ಪ್ರಯತ್ನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಈತನ ವಿರುದ್ಧ ಲಷ್ಕರ್ ಠಾಣೆಯಲ್ಲಿ 3 ಪ್ರಕರಣ ಮತ್ತು ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಯಿಂದ 7,53,500 ಮೌಲ್ಯದ 150 ಗ್ರಾಂ ಚಿನ್ನ ಮತ್ತು 25 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.