ಮೈಸೂರು : ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಅಪ್ರಾಪ್ತ ಬಾಲಕನ ಸ್ನೇಹ ಬೆಳಸಿದ ಮೂವತ್ತೈದು ವರ್ಷದ ಮಹಿಳೆಯೊಬ್ಬರು ತನ್ನ ಜತೆಗೆ ಮದುವೆಯಾಗುವಂತೆ ಪಟ್ಟು ಹಿಡಿದ ವಿಚಿತ್ರ ಘಟನೆ ನಂಜನಗೂಡು ತಾಲೂಕಿನ ಗ್ರಾಮ ಒಂದರಲ್ಲಿ ನಡೆದಿದೆ.
ಘಟನೆ ವಿವರ : ಗಂಡನಿಂದ ದೂರವಾಗಿ ತನ್ನ ಮೂರು ಮಕ್ಕಳ ಜೊತೆ ವಾಸವಿರುವ ಮಹಿಳೆಗೆ, ಸಾಮಾಜಿಕ ಜಾಲತಾಣದಲ್ಲಿ 17 ವರ್ಷದ ಅಪ್ರಾಪ್ತ ಬಾಲಕನೊಂದಿಗೆ ಪರಿಚಯವಾಗಿದೆ. ದಿನ ಕಳದಂತೆ ಈ ಪರಿಚಯ ಚಾಟಿಂಗ್ನಲ್ಲಿ ಮುಂದುವರೆದಿದೆ. ಈಗ ಆ ಮಹಿಳೆ ತನ್ನನ್ನು ಮದುವೆ ಆಗುವಂತೆ ಕೇಳಿ, ಅಪ್ರಾಪ್ತ ಬಾಲಕನ ಮನೆಗೆ ಬಂದು ಕುಳಿತ್ತಿದ್ದಾಳೆ.
ಇದಕ್ಕು ಮೊದಲು ಅಪ್ರಾಪ್ತ ಬಾಲಕ ಮತ್ತು ಮೂವತ್ತೈದು ವರ್ಷದ ಮಹಿಳೆ ಮೂರು ದಿನ ಪ್ರವಾಸ ಮಾಡಿದ್ದಾರಂತೆ. ನಂತರ ಮಹಿಳೆ ಅಪ್ರಾಪ್ತನೊಂದಿಗೆ ದೈಹಿಕ ಸಂಪರ್ಕ ಸಹ ಬೆಳೆಸಿರುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಮೂರು ದಿನ ಪ್ರವಾಸದ ನಂತರ ವಾಪಸ್ ಮನೆಗೆ ಬಂದ ಅಪ್ರಾಪ್ತ ಬಾಲಕ, ಮನೆಯವರಿಗೆ ನನ್ನ ಮೊಬೈಲ್ ಕಳೆದುಹೋಗಿತ್ತು ಎಂದು ಸುಳ್ಳು ಕಥೆ ಹೇಳಿದ್ದಾನೆ.
ಮೂರು ದಿನದ ಪ್ರವಾಸದ ನಂತರ ವಿವಾಹಿತ ಮಹಿಳೆ ಅಪ್ರಾಪ್ತನ ಮನೆಗೆ ಬಂದು ನಾನು ನಿಮ್ಮ ಮಗನನ್ನ ಪ್ರೀತಿಸುತ್ತಿದ್ದೇನೆ. ಅವನ ಜೊತೆ ಮೂರು ದಿನ ಜೊತೆಯಲ್ಲಿದ್ದೆ. ನನಗೆ ಆತನನ್ನ ಮದುವೆ ಮಾಡಿಕೊಡಿ ಎಂದು ಬಾಲಕನ ಪೋಷಕರಲ್ಲಿ ಮನವಿ ಮಾಡಿದ್ದಾಳೆ. ಇದಕ್ಕೆ ಕುಟುಂಬದವರು ಒಪ್ಪಗೆ ನೀಡಿಲ್ಲ. ನಂತರ ಗ್ರಾಮದಲ್ಲಿ ಈ ಘಟನೆ ಕುರಿತು ನ್ಯಾಯ ಪಂಚಾಯ್ತಿ ನಡೆಸಲಾಗಿದೆ. ಅದಕ್ಕು ಒಪ್ಪದ ಮಹಿಳೆ ನನೆಗೆ ಅಪ್ರಾಪ್ತನನ್ನು ಮದುವೆ ಮಾಡಿಕೊಡಿ ಎಂದು ಪಟ್ಟು ಹಿಡಿದಿದ್ದಾಳೆ.
ಕೊನೆಗೆ ಅಪ್ರಾಪ್ತನ ಪೋಷಕರು ಮಗನನ್ನ ರಕ್ಷಿಸುವಂತೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಫೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.