ಮೈಸೂರು: ಕೊರೊನಾ ಹೆಚ್ಚಾಗಿ ಹರಡುತ್ತಿರುವ ಎನ್.ಆರ್. ಕ್ಷೇತ್ರದ ಕೆಲವು ಏರಿಯಾಗಳನ್ನು ಮಾತ್ರ ಲಾಕ್ಡೌನ್ ಮಾಡುವ ವಿಚಾರವಿದೆ. ಇಡೀ ಎನ್.ಆರ್. ಕ್ಷೇತ್ರ ಲಾಕ್ಡೌನ್ ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಹೇಳಿದ್ದಾರೆ.
ಸದ್ಯಕ್ಕೆ ನಮಗೆ ಎನ್.ಆರ್. ಕ್ಷೇತ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಸಾವಿನ ಸಂಖ್ಯೆಯು ಸಹ ಇಲ್ಲೇ ಹೆಚ್ಚಾಗಿದೆ. ಇಲ್ಲಿ ಬಡವರು ಹೆಚ್ಚಾಗಿರುವುದರಿಂದ ಐಸೊಲೇಷನ್ ಮಾಡುವುದಕ್ಕೆ ಆಗುವುದಿಲ್ಲ. ಸೋಂಕು ಬೇಗ ಹರಡುವ ಸಾಧ್ಯತೆ ಇರುವ ಪ್ರದೇಶಗಳನ್ನು ಗುರುತಿಸಿ, ತಜ್ಞರ ಜೊತೆ ಮಾತನಾಡಿ, ಮುಂಬೈನ ಧಾರಾವಿ ಮಾದರಿಯಲ್ಲಿ ಲಾಕ್ಡೌನ್ ಮಾಡುವ ಚಿಂತನೆ ಇದೆ. ಅದನ್ನು ಬಿಟ್ಟು ಇಡೀ ಎನ್.ಆರ್. ಕ್ಷೇತ್ರವನ್ನೇ ಲಾಕ್ಡೌನ್ ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಲಾಕ್ಡೌನ್ ಸಮಯದಲ್ಲಿ ಪ್ರತಿಯೊಂದು ಮನೆಯ ಸರ್ವೇ ಮಾಡಿ ಯಾರಿಗೆ ಕಿಡ್ನಿ ಕಾಯಿಲೆ, ಉಸಿರಾಟ ಸಮಸ್ಯೆ ಸೇರಿದಂತೆ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದಾರೋ, ಅವರನ್ನು ಗುರುತಿಸಿ ಮೈಸೂರಿಗೆ ಬಂದಿರುವ 2,300 ಆಧುನಿಕ ಕೊರೊನಾ ಟೆಸ್ಟಿಂಗ್ ಕಿಟ್ ಬಳಸಿ ಮನೆಯ ಹತ್ತಿರವೇ ಟೆಸ್ಟ್ ಮಾಡಿ, 30 ನಿಮಿಷಗಳಲ್ಲಿ ವರದಿ ನೀಡುತ್ತೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕೆಲವರು ಇಡೀ ಜಿಲ್ಲೆಯನ್ನೇ ಲಾಕ್ಡೌನ್ ಮಾಡಿ ಎಂದು ಹೇಳಿದರೆ, ಮತ್ತೆ ಕೆಲವರು ಬೇಡ ಎನ್ನುತ್ತಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.