ಮೈಸೂರು: ಕಾಂಗ್ರೆಸ್ ಹಾಗೂ ತೃತೀಯ ರಂಗ ಪಕ್ಷಗಳು ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಲಿವೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅಚಲ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ರಾಜೀವ್ ಗಾಂಧಿ ಪುಣ್ಯ ಸ್ಮರಣೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲ ತಿಂಗಳ ಹಿಂದೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿಯೂ ಸಮೀಕ್ಷೆಗಳು ಬಿಜೆಪಿ ಪರವಾಗಿತ್ತು. ಆದರೆ, ಫಲಿತಾಂಶದಂದು ಕಾಂಗ್ರೆಸ್ ಎಷ್ಟು ಸ್ಥಾನ ಗೆದ್ದಿದೆ ಎಂಬುವುದು ದೇಶದ ಜನರಿಗೆ ಗೊತ್ತಿದೆ. ಚುನಾವಣಾ ಪೂರ್ವ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆ ಇಲ್ಲ. ಅದೆಷ್ಟೋ ಚುನಾವಣಾ ಸಮೀಕ್ಷೆಗಳು ಸುಳ್ಳಾಗಿವೆ. ಮೇ 23ರಂದು ಕಾದು ನೋಡಿ ಎಂದರು.
ಕ್ಷೇತ್ರದಲ್ಲಿ ಕೆಲವು ಜೆಡಿಎಸ್ ನಾಯಕರು ತಪ್ಪು ಮಾಡಿದ್ದಾರೆ. ಎಲ್ಲ ಕಡೆ ಈ ರೀತಿ ಆಗಿಲ್ಲ. ಇಲ್ಲಿ ನನ್ನ ಗೆಲುವು ಖಚಿತ. 6 ಬಾರಿ ಲೋಕಸಭಾ ಹಾಗೂ 5 ವಿಧಾನಸಭಾ ಚುನಾವಣೆ ಎದುರಿಸಿದ ವ್ಯಕ್ತಿಗೆ ಜನರ ನಾಡಿ ಮಿಡಿತ ಅರ್ಥವಾಗಿದೆ. ಇನ್ನೊಂದು ದಿನ ಕಾದು ನೋಡಿ ಎಂದಿದ್ದಾರೆ.