ಮೈಸೂರು: ಮಹಾರಾಜರ ನಗರಿ ಮೈಸೂರಿಗೂ ಯೋಗಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿ ಯೋಗದ ಬೆಳವಣಿಗೆಗೆ ರಾಜಮನೆತನದವರ ಸಹಕಾರ ಮಹತ್ವದ್ದು. ನಗರದಲ್ಲಿ ಯೋಗ ಬೆಳೆದು ಬಂದ ಹಾದಿಯೇ ವಿಶಿಷ್ಟವಾಗಿದೆ. ಆದ್ದರಿಂದಲೇ ಪ್ರಪಂಚದಲ್ಲೇ ಸಾಂಸ್ಕೃತಿಕ ನಗರಿಗೆ ಯೋಗ ನಗರಿ ಎಂಬ ಖ್ಯಾತಿ ಬಂದಿದೆ.
ಆಧುನಿಕ ಯುಗದಲ್ಲಿ ಯೋಗ ವಿಶ್ವದ ಗಮನ ಸೆಳೆದಿದ್ದು ಜೂನ್ 21 ರಂದು. ಭಾರತ ಸೇರಿದಂತೆ ವಿಶ್ವದ ಇತರೆ ರಾಷ್ಟ್ರಗಳು ಅಂತಾರಾಷ್ಟ್ರೀಯ ಯೋಗ ದಿನಾಚರಿಸುತ್ತಾ ಬಂದಿವೆ. ಈ ಬಾರಿ ಅಂದರೆ, ನಾಳೆ ಪ್ರಧಾನಿ ನರೇಂದ್ರ ಮೋದಿ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗಾಗಿ ಮೈಸೂರಿಗೆ ಆಗಮಿಸಲಿದ್ದು, ಅಂಬಾವಿಲಾಸ ಅರಮನೆಯ ಮುಂಭಾಗ ಯೋಗ ದಿನದಲ್ಲಿ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ರಾಜಧಾನಿ ಯೋಗ ರಾಜಧಾನಿಯಾಗಿ ಬೆಳೆಯುವುದರಲ್ಲಿ ರಾಜಮನೆತನದ ಪಾತ್ರ ಹಿರಿದು. ಮೈಸೂರಿಗೆ ಆಧುನಿಕ ಯೋಗವನ್ನು ಪರಿಚಯಿಸಿದ ಕೀರ್ತಿ ತಿರುಮಲೈ ಕೃಷ್ಣಮಾಚಾರ್ಯ ಅವರಿಗೆ ಸಲ್ಲುತ್ತದೆ. ಇವರು 1930ರ ದಶಕದಲ್ಲಿ ಅರಮನೆ ಸದಸ್ಯರಿಗೆ ಯೋಗ ಕಲಿಸುತ್ತಿದ್ದರು ಎಂದು ಇತಿಹಾಸಕಾರ ಹಾಗೂ ಲೇಖಕ ನಾರ್ಮನ್ ಇಸೋ ಜೆಮನ್ ತಮ್ಮ "ಯೋಗ ಟ್ರೆಡಿಷನ್ ಆಫ್ ದಿ ಮೈಸೂರು" ಕೃತಿಯಲ್ಲಿ ದಾಖಲಿಸಿದ್ದಾರೆ.
ಕೃಷ್ಣಮಾಚಾರ್ಯರ ಶಿಷ್ಯರಲ್ಲಿ ಶ್ರೀನಿವಾಸ ಅಯ್ಯಂಗಾರ್, ಪಟ್ಟಾಭಿ ಜೋಯಿಸ್, ಬಿಕೆಎಸ್ ಅಯ್ಯಂಗಾರ್ ಪ್ರಮುಖರು. ಈ ಮೂವರು ಯೋಗದಲ್ಲಿ ಮೈಸೂರು ಶೈಲಿಯನ್ನು ಜಗತ್ತಿನ ಮೂಲೆಮೂಲೆಗೂ ಪರಿಚಯಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. 1930ರ ದಶಕದಲ್ಲಿ ವಾರಣಾಸಿಗೆ ಭೇಟಿ ನೀಡಿದ್ದಾಗ ಅಲ್ಲಿ ನೆಲೆಸಿದ್ದ ಕೃಷ್ಣಮಾಚಾರ್ಯರ ಯೋಗಸಾಧನೆ ಬಗ್ಗೆ ತಿಳಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಅವರನ್ನು ಮೈಸೂರಿಗೆ ಬರುವಂತೆ ಆಹ್ವಾನಿಸಿದ್ದರು. ರಾಜರ ಆಹ್ವಾನದ ಮೇರೆಗೆ ಮೈಸೂರಿಗೆ ಬಂದ ಕೃಷ್ಣಮಾಚಾರ್ಯರು, ಆರಂಭದಲ್ಲಿ ರಾಜಕುಟುಂಬಕ್ಕಷ್ಟೇ ಯೋಗ ಕಲಿಸುತ್ತಿದ್ದರು. ಆ ನಂತರದಲ್ಲಿ ಸಂಸ್ಕೃತ ಕಾಲೇಜಿನಲ್ಲಿ ಯೋಗ ಶಾಲೆ ತೆರೆದು ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಿದರು.
ಕೃಷ್ಣಮಾಚಾರ್ಯರ ಶಿಷ್ಯರಾದ ಪಟ್ಟಾಭಿ ಜೋಯಿಸ್ ಮೈಸೂರಿನಲ್ಲಿ ಉಳಿದು ಅಷ್ಟಾಂಗಯೋಗವನ್ನು ಹೆಚ್ಚು ಪ್ರಚುರಪಡಿಸಿದರು. ಅವರ ಪುತ್ರಿ ಸರಸ್ವತಿ ಹಾಗೂ ಮೊಮ್ಮಗ ಶರತ್ ಪಟ್ಟಾಭಿ, ನಗರದ ಗೋಕುಲದಲ್ಲಿ "ಕೆ.ಪಟ್ಟಾಭಿ ಜೋಯಿಸ್ ಅಷ್ಟಾಂಗ ಯೋಗ ಶಾಲೆ ಕೇಂದ್ರ"ದ ಮೂಲಕ ಯೋಗ ಪರಂಪರೆ ಮುಂದುವರಿಸುತ್ತಿದ್ದಾರೆ.
ಬಿಕೆಎಸ್ ಐಯ್ಯಂಗಾರ್ "ಅಯ್ಯಂಗಾರ್ ಯೋಗ ಸ್ಕೂಲ್" ಮೂಲಕ ಯೋಗಪಟುಗಳನ್ನು ಪ್ರಚುರಪಡಿಸಿ ಮೈಸೂರು ಶೈಲಿಯ ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಟ್ಟಿದ್ದಾರೆ. ಶ್ರೀನಿವಾಸ ಅಯ್ಯಂಗಾರ್ ಲಕ್ಷ್ಮೀಪುರಂನ "ಶ್ರೀರಂಗ ಅಫ್ ಅಷ್ಟಾಂಗ ಯೋಗ ವಿಜ್ಞಾನ ಮಂದಿರ" ಸ್ಥಾಪಿಸಿ ಯೋಗ ಪಟುಗಳನ್ನು ಹುಟ್ಟುಹಾಕಿದ್ದಾರೆ.
2014ರಲ್ಲಿ ವಿಶ್ವಸಂಸ್ಥೆ ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಿತ್ತು. ಎಂಟು ವರ್ಷದ ಬಳಿಕ ರಾಜ್ಯದ ಯೋಗ ರಾಜ್ಯಧಾನಿ ಎಂದು ಕರೆಸಿಕೊಳ್ಳುವ ಮೈಸೂರಿನಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯಲಿದ್ದು, ದೊಡ್ಡಮಟ್ಟದ ಯೋಗ ಪ್ರದರ್ಶನ ನೀಡಿದ ಕೀರ್ತಿ ಮೈಸೂರು ಯೋಗ ಒಕ್ಕೂಟಕ್ಕೆ ಸಲ್ಲಲಿದೆ. ಈ ನಿಟ್ಟಿನಲ್ಲಿ ಯೋಗ ಒಕ್ಕೂಟದ ಸಂಸ್ಥೆಗಳು ಕೆಲಸ ಮಾಡುತ್ತಿವೆ. 2015ರಿಂದ ಅರಮನೆ ಮೈದಾನದ ಮುಂಭಾಗದಲ್ಲಿ ಯೋಗ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಪ್ರಧಾನಿ ಮೋದಿ ಭಾಗಿಯಾಗಿರುವುದು ಹೆಮ್ಮೆಯ ವಿಷಯವಾಗಿದೆ.
ಗಿನ್ನಿಸ್ ದಾಖಲೆ: 2018ರ ಯೋಗ ದಿನ ರೇಸ್ ಕೋರ್ಸ್ ಕ್ಲಬ್ನ ಆವರಣದಲ್ಲಿ ನಡೆದಿದ್ದು ಏಕಕಾಲಕ್ಕೆ 55,506 ಸಾವಿರ ಮಂದಿ ಯೋಗ ಪ್ರದರ್ಶಿಸಿದ್ದು, ಗಿನ್ನಿಸ್ ದಾಖಲೆಯಾಗಿತ್ತು. 2010ರಲ್ಲಿ ಮೈಸೂರು ದಸರಾದಲ್ಲಿ ಯೋಗ ದಸರಾ ಸೇರ್ಪಡೆಗೊಳಿಸುವ ಮೂಲಕ ಯುವ ಸಮುದಾಯಕ್ಕೆ ಯೋಗ ತಲುಪುವಲ್ಲಿ ಸಹಕಾರಿಯಾಗಿದೆ.
ಯೋಗ ಕೇಂದ್ರಗಳ ಅಬ್ಬರ: ಪತಂಜಲಿ ಯೋಗ ಸೂತ್ರಗಳನ್ನು ಆಧರಿಸಿ ಯೋಗ ಕಲಿಸುವ 80ಕ್ಕೂ ಅಧಿಕ ಕೇಂದ್ರಗಳಲ್ಲಿ ಉಚಿತ ಬೋಧನೆ ಇರುವುದು ವಿಶೇಷ. ಉಳಿದಂತೆ, ಗೋಕುಲದಲ್ಲಿ ಅತ್ಯಾಧುನಿಕ ಯೋಗ ಕೇಂದ್ರಗಳಿವೆ. ಅನೇಕ ಕೇಂದ್ರಗಳಲ್ಲಿ ಉಚಿತ ಯೋಗಾಭ್ಯಾಸದ ತರಬೇತಿಗೆ ಮಾಸಿಕ ₹500ರಿಂದ ₹750ರವರೆಗೆ ಶುಲ್ಕ ತಗುಲುತ್ತದೆ. ಉಳಿದಂತೆ ಕೆಲವು ಕೇಂದ್ರಗಳು ವಿದೇಶಿಯರಿಗಷ್ಟೇ ಸೀಮಿತವಾಗಿದೆ.
ಮೂರು ತಿಂಗಳು ಮತ್ತು ಆರು ತಿಂಗಳ ಕೋರ್ಸಿನ ಆಧಾರದಲ್ಲಿ 30 ರಿಂದ 40 ಸಾವಿರ ರೂ.ವರೆಗೂ ಶುಲ್ಕವನ್ನು ಪಡೆಯಲಾಗುತ್ತಿದೆ. ಪ್ರತಿ ವರ್ಷ ಸುಮಾರು 20,000ಕ್ಕೂ ಹೆಚ್ಚು ಮಂದಿ ವಿದೇಶಿಗರು ಮೈಸೂರಿಗೆ ಯೋಗ ಕಲಿಯಲು ಬರುವ ಅಂದಾಜಿದೆ.
ಇದನ್ನೂ ಓದಿ: ಮೋದಿ ಮೈಸೂರಲ್ಲಿ ಯೋಗ ಮಾಡುವ ಮೂಲಕ ಸಾಧಿಸುವುದೇನು?: ಸಿದ್ದರಾಮಯ್ಯ