ಮೈಸೂರು: ಕೋವಿಡ್ ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ತಿ.ನರಸೀಪುರ ತಾಲೂಕಿನ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ.
ಜಿಲ್ಲೆಯ ತಿ.ನರಸೀಪುರ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿರುವ ತಾಲೂಕು ಕೋವಿಡ್ ಆಸ್ಪತ್ರೆಯಲ್ಲಿ ನೂರಾರು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ ಸರಿಯಾದ ಶುಚಿತ್ವವಿಲ್ಲ. ಕಸ ವಿಲೇವಾರಿ ಮಾಡುತ್ತಿಲ್ಲ. ಸರಿಯಾದ ಊಟ-ಉಪಹಾರ, ನೀರು ಕೊಡುತ್ತಿಲ್ಲ. ಇದರಿಂದ ನಮಗೆ ಕೊರೊನಾದಿಂದ ಮುಕ್ತಿ ಸಿಗುವುದಿಲ್ಲ ಎಂದು ತಾಲೂಕು ಆಡಳಿತದ ವಿರುದ್ಧ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಿಯಾದ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯ ಶಾಸಕರಿಗೆ ಹಾಗೂ ತಹಶೀಲ್ದಾರ್ ನಾಗೇಶ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ನಾವು ಇಲ್ಲಿ ಬಂದು 5 ದಿನಗಳಾಗಿದೆ. ಇಲ್ಲಿ ಸರಿಯಾದ ಊಟದ ವ್ಯವಸ್ಥೆ ಇಲ್ಲ. ಊಟದಲ್ಲಿ ಕಲ್ಲು ಹಾಗೂ ಕಸ ಇರುತ್ತದೆ. ತಿನ್ನಲು ಬಹಳ ಕಷ್ಟವಾಗುತ್ತದೆ. ಜೊತೆಗೆ ಶೌಚಾಲಯದ ವ್ಯವಸ್ಥೆ ಸರಿಯಾಗಿ ಇಲ್ಲ. ವೈದ್ಯರು ಸಹ ಬಂದು ವಿಚಾರಿಸುವುದಿಲ್ಲ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಕಲ್ಪಿಸಲಬೇಕು ಎಂದರು.
ಅಧಿಕಾರಿಗಳು ಬಂದು ಇಲ್ಲಿನ ವ್ಯವಸ್ಥೆ ಹೇಗಿದೆ ಎಂದು ಪರಿಶೀಲಿಸಲಿ. ನಮಗೆ ಅಲ್ಲದಿದ್ದರು ಮುಂದೆ ದಾಖಲಾಗುವ ಸೋಂಕಿತರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಕೊರೊನಾ ಸೋಂಕಿತರು, ಆರೋಗ್ಯಾಧಿಕಾರಿಗಳು, ತಹಶೀಲ್ದಾರ್ ಹಾಗೂ ಸ್ಥಳೀಯ ಶಾಸಕ ಅಶ್ವಿನ್ ಕುಮಾರ್ ಅವರಿಗೆ ಮನವಿ ಮಾಡಿಕೊಂಡರು.