ಮೈಸೂರು: ಎರಡನೇ ಹಂತದ ಕೋವಿಡ್ ಭೀತಿಯಿಂದ ಮೈಸೂರು ಅರಮನೆಗೆ ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.
ಕಳೆದ ವರ್ಷ ಕೊರೊನಾದಿಂದ ಮೈಸೂರು ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿತ್ತು. ಈ ನಡುವೆ ಕೊಂಚ ಚೇತರಿಕೆ ಕಂಡಿದ್ದ ಪ್ರವಾಸೋದ್ಯಮಕ್ಕೆ ಮತ್ತೆ ಕೊರೊನಾ ಕಾಟ ಎದುರಾಗಿದೆ. ಎರಡನೇ ಹಂತದ ಕೊರೊನಾ ಹರಡುತ್ತಿದೆ ಎಂಬ ಸುದ್ದಿಯಿಂದ ಭಯಗೊಂಡ ಪ್ರವಾಸಿಗರು ಮೈಸೂರಿನ ಕಡೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಕೇರಳದಿಂದ ಅತಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದು, ಇತ್ತೀಚೆಗೆ ಅವರ ಸಂಖ್ಯೆಯೂ ಸಹ ಕಡಿಮೆಯಾಗಿದೆ.
ಇಳಿಕೆ ಕಂಡ ಪ್ರವಾಸಿಗರ ಸಂಖ್ಯೆ:
ಕಳೆದ ವಾರ ಮೈಸೂರು ಅರಮನೆಗೆ ಪ್ರತಿ ದಿನ 4 ರಿಂದ 6 ಸಾವಿರ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ ಕಳೆದ 2-3 ದಿನಗಳಿಂದ 2 ಸಾವಿರಕ್ಕೂ ಕಡಿಮೆ ಪ್ರವಾಸಿಗರು ಅರಮನೆಗೆ ಆಗಮಿಸುತ್ತಿದ್ದಾರೆ ಎಂದು ಅರಮನೆ ಆಡಳಿತ ಮಂಡಳಿಯ ಉಪನಿರ್ದೇಶಕ ಸುಬ್ರಹ್ಮಣ್ಯ ಈ ಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.
ಕೋವಿಡ್ ನಿಯಮ ಪಾಲನೆ ಕಡ್ಡಾಯ:
ಮೈಸೂರು ಅರಮನೆಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರಿಗೂ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸಲಾಗುವುದು. ಇದಕ್ಕಾಗಿಯೇ ಹೆಚ್ಚುವರಿ 30 ಸಿಬ್ಬಂದಿಯನ್ನು ತೆಗೆದುಕೊಳ್ಳಲಾಗಿದ್ದು, ಅವರು ಅರಮನೆಗೆ ಭೇಟಿ ನೀಡುವ ಪ್ರತಿ ಪ್ರವಾಸಿಗರಿಗೂ ಕೋವಿಡ್ ಪರೀಕ್ಷೆ ನಡೆಸುತ್ತಾರೆ. ಅದರಲ್ಲೂ ಹೊರ ರಾಜ್ಯದಿಂದ ಬಂದ ಪ್ರವಾಸಿಗರನ್ನು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೋವಿಡ್ ಲಕ್ಷಣಗಳು ಕಂಡುಬಂದರೆ ಅವರಿಗೆ ಅರಮನೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದಿಲ್ಲ.
ಈ ಸುದ್ದಿಯನ್ನೂ ಓದಿ: ಜಿಲ್ಲೆಯ ಗಡಿ ಭಾಗದಲ್ಲಿ ಕೇರಳ ಪ್ರವಾಸಿಗರಿಗೆ ಕೊರೊನಾ ಟೆಸ್ಟ್ ಕಡ್ಡಾಯ: ಮೈಸೂರು ಎಸ್ಪಿ
ಪ್ರತಿ ದಿನ 3 ಬಾರಿ ಅರಮನೆಗೆ ಸ್ಯಾನಿಟೈಸೇಶನ್ ಮಾಡಲಾಗುವುದು. ಸಂಜೆಯ ನಂತರ ಮತ್ತೊಂದು ಬಾರಿ ಸ್ಯಾನಿಟೈಸೇಶನ್ ಮಾಡಲಾಗುವುದು ಎಂದು ಸುಬ್ರಹ್ಮಣ್ಯ ತಿಳಿಸಿದರು.