ಮೈಸೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಹಿನ್ನಲೆಯಲ್ಲಿ ದಾಖಲಾಗಿರುವ ದೂರಿನ ವಿರುದ್ಧ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಹೇಳಿದರು.
ಇಂದು ನಾಮಪತ್ರ ಸಲ್ಲಿಕೆಗೆ ಮುಂಚೆ ಚಾಮುಂಡಿ ಬೆಟ್ಟಕ್ಕೆ ಕುಟುಂಬ ಸಮೇತ ತೆರಳಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ನರೇಂದ್ರ ಮೋದಿ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡುತ್ತಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದರು.
ನನ್ನ ವಿರುದ್ಧದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಪ್ರಕರಣದ ಹಿನ್ನೆಲೆ: ಕಳೆದ ಐದು ವರ್ಷದಲ್ಲಿ ಸಂಸದರಾಗಿ ಮಾಡಿದ ಸಾಧನೆಗಳ ಪುಸ್ತಕಗಳನ್ನು ಮತದಾರನ ಮನೆಗೆ ಅಂಚೆಯ ಮೂಲಕ ಕಳಿಸಲಾಗುತ್ತಿದ್ದು, ಪುಸ್ತಕದಲ್ಲಿ ಮುದ್ರಕರ ಹೆಸರು ಹಾಗೂ ಮುದ್ರಣದ ಸಂಖ್ಯೆಯನ್ನು ನಮೂದಿಸಿಲ್ಲ. ಇದೊಂದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ, ಎಂದು ಕೆ.ಎಸ್. ಶಿವರಾಮ್ ಎಂಬುವರು ಮೈಸೂರು ನಗರದ ವಿವಿ ಪುರಂ ಠಾಣೆಯಲ್ಲಿ ದೂರು ನೀಡಿದ್ದರು.ದೂರು ನೀಡಿದ ಹಿನ್ನಲೆಯಲ್ಲಿ ಪ್ರತಾಪ್ ಸಿಂಹ ವಿರುದ್ಧ ಪ್ರಕರಣ ದಾಖಲಾಗಿದೆ.