ಮೈಸೂರು: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ(ಆರ್ಸಿಇಸಿ) ಮುಕ್ತ ವ್ಯಾಪಾರ ಒಪ್ಪಂದದಿಂದ ನಮ್ಮ ದೇಶದ ಆಹಾರ ಹಾಗೂ ಕೃಷಿ ಕ್ಷೇತ್ರಕ್ಕೆ ದೊಡ್ಡ ಕಂಟಕವಾಗಲಿದೆ ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಸಿಯಾನ್ ದೇಶಗಳು ಸೇರಿದಂತೆ ದೊಡ್ಡ ಕೈಗಾರಿಕಾ ಆರ್ಥಿಕತೆ ಹೊಂದಿರುವ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಸೇರಿದಂತೆ 15 ದೇಶಗಳೊಂದಿಗೆ ಭಾರತ ಆರ್ಸಿಇಪಿ ಮಾತುಕತೆ ನಡೆಸಿದೆ. ಒಂದು ವೇಳೆ ಭಾರತ ಈ ಒಪ್ಪಂದಕ್ಕೆ ಸಹಿ ಹಾಕಿದಲ್ಲಿ ನಮ್ಮ ದೇಶದಲ್ಲಿ ಮತ್ತಷ್ಟು ರೈತರು ಆತ್ಮಹತ್ಯೆಗೆ ಶರಣಾಗುತ್ತಾರೆ. ಕೃಷಿ ಕ್ಷೇತ್ರ ಸಂಪೂರ್ಣ ನಾಶವಾಗುತ್ತದೆ ಎಂದು ಎಚ್ಚರಿಸಿದರು.
ಆರ್ಸಿಇಪಿ ಮತ್ತು ಇತರೆ ಎಲ್ಲಾ ಮುಕ್ತ ವ್ಯಾಪಾರ ಒಪ್ಪಂದಗಳಿಂದ ಕೃಷಿಯನ್ನು ಹೊರಗಿಡಲು ಕೇಂದ್ರ ಸರ್ಕಾರ ಮುಂದಾಗಬೇಕು. ಇಲ್ಲವಾದರೆ ಕೃಷಿ ವಲಯ ಹಾಗೂ ಆಹಾರಕ್ಕೆ ಕುತ್ತು ಬರಲಿದೆ ಎಂದು ಹಿರೇಮಠ ಆತಂಕ ವ್ಯಕ್ತಪಡಿಸಿದರು.