ಮೈಸೂರು: ಚಿನ್ನದ ವ್ಯಾಪಾರಿಯೊಬ್ಬರನ್ನು ನಂಬಿಸಿ ನಾಪತ್ತೆಯಾಗಿದ್ದ ಕೇರಳ ಮೂಲದ ಅಂತಾರಾಜ್ಯ ವಂಚಕನನ್ನು ಲಷ್ಕರ್ ಠಾಣಾ ಪೊಲೀಸರು ಬಂಧಿಸಿ, ಆತನಿಂದ ಕಾರು ಮತ್ತು 45 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.
ಬಂಧಿತ ವಂಚಕ ಹಮೀದ್ ಅಲಿ (46) ಕೇರಳ ರಾಜ್ಯದ ಕಾಸರಗೋಡು ಬಳಿಯ ಮುಟ್ಟತೋಡಿ ಗ್ರಾಮದವನ್ನಾಗಿದ್ದು, ಚಿನ್ನದ ವ್ಯಾಪಾರಿ ಇಂದರ್ ಚಂದ್ ಎಂಬುವವರೇ ವಂಚನೆಗೆ ಒಳಗಾದ ವ್ಯಕ್ತಿ. ಇಂದರ್ ಚಂದ್ ಲಷ್ಕರ್ ಮೊದಲ್ಲಾದ ಕೆ.ಆರ್.ಹೆಚ್ ರಸ್ತೆಯಲ್ಲಿ ಮಾತಾಜಿ ಬುಲಿಯನ್ಸ್ ಎಂಬ ಹೆಸರಿನಲ್ಲಿ ಚಿನ್ನದ ವ್ಯಾಪಾರ ನಡೆಸುತ್ತಿದ್ದರು. ಇವರೊಂದಿಗೆ ಹಮೀದ್ ಅಲಿ ವ್ಯವಹಾರ ಇಟ್ಟುಕೊಂಡಿದ್ದ. ಸಣ್ಣ ಪ್ರಮಾಣದಲ್ಲಿ ಚಿನ್ನ ಪಡೆದು ಹಿಂದಿರುಗಿಸಿ ನಂಬಿಕೆ ಬೆಳೆಸಿಕೊಂಡಿದ್ದ.
ಘಟನೆಯ ವಿವರ: ಆಗಸ್ಟ್ 10ರಂದು ಇಂದರ್ ಚಂದ್ ಬಳಿ ಸ್ವಲ್ಪ ಹಣ ಪಾವತಿಸಿ 1 ಕೆಜಿ ಗಟ್ಟಿ ಚಿನ್ನ ಪಡೆದಿದ್ದಾನೆ ಹಮೀದ್ ಅಲಿ. ನಂತರ ಬಾಕಿ ಹಣವನ್ನು ತಂದು ಕೊಡುತ್ತೇನೆ ಎಂದು ಹೋದ ವ್ಯಕ್ತಿ ನಾಪತ್ತೆಯಾಗಿದ್ದ. ಈ ಬಗ್ಗೆ ಇಂದರ್ ಚಂದ್ ಲಷ್ಕರ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಕಾಸರಗೋಡಿನಲ್ಲಿ ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಆರೋಪಿ 1 ಕೆಜಿ ಚಿನ್ನದಲ್ಲಿ ಅರ್ಧ ಕೆಜಿ ಚಿನ್ನವನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಿದ್ದ. ಉಳಿದ ಅರ್ಧ ಚಿನ್ನವನ್ನು ಎರಡು ಮೂರು ಭಾಗವಾಗಿ ಮಾಡಿ ಬೆಂಗಳೂರಿನಲ್ಲಿ ಬೇರೆ ಬೇರೆ ಕಡೆ ಮಾರಾಟ ಮಾಡಿದ್ದು, ಬಂದ ಹಣದಲ್ಲಿ ಕಾರನ್ನು ಸಹ ಖರೀದಿಸಿದ್ದನಂತೆ. ಆ ಕಾರು ಮತ್ತು 45 ಲಕ್ಷ ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.