ಮೈಸೂರು: ಬಿಬಿಎಂಪಿಯ ಬೆಡ್ ಬ್ಲಾಕಿಂಗ್ ದಂಧೆ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಬಿಎಂಪಿಯ ಬೆಡ್ ಬ್ಲಾಕಿಂಗ್ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಈ ದಂಧೆಯನ್ನು ಹೊರ ತರುವ ಸಂದರ್ಭದಲ್ಲಿ ಅವರು ಒಂದು ಧರ್ಮದ ಹೆಸರಿರುವ ವ್ಯಕ್ತಿಗಳ ಪಟ್ಟಿಯನ್ನು ಓದಿದರು ಎಂದು ಕೆಲವರು ಟೀಕಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತೇಜಸ್ವಿ ಸೂರ್ಯರನ್ನು ಟೀಕಿಸುವುದು ಸರಿಯಲ್ಲ. ಅದನ್ನು ಬಿಟ್ಟು ಈಗಿರುವ ಕೋವಿಡ್ ಪರಿಸ್ಥಿತಿಯನ್ನು ಸುಧಾರಿಸುವ ವ್ಯವಸ್ಥೆಯನ್ನು ಟೀಕಾಕಾರರು ಮಾಡಲಿ ಎಂದರು.
ಆಕ್ಸಿಜನ್ ವಿಚಾರದಲ್ಲಿ ಮನಸ್ತಾಪ ಬೇಡ:
ಮೈಸೂರು ಜಿಲ್ಲೆಯ ಅಕ್ಕಪಕ್ಕ ಇರುವ ಚಾಮರಾಜನಗರ, ಮಂಡ್ಯ, ಹಾಸನ, ನಾವು ಎಲ್ಲರು ಸೋದರರಿದ್ದಂತೆ. ಆಕ್ಸಿಜನ್ ವಿಚಾರದಲ್ಲಿ ನಮ್ಮ-ನಮ್ಮ ನಡುವೆ ವಿರಸ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿ ತಿಳಿಯಾಗಬೇಕಾದರೆ ರಾಜ್ಯ ಸರ್ಕಾರ ಜಿಲ್ಲಾವಾರು ಆಕ್ಸಿಜನ್ ಕೋಟಾವನ್ನು ನಿರ್ಧಾರ ಮಾಡಬೇಕು. ಅದನ್ನು ಹೊರತುಪಡಿಸಿ ಆಕ್ಸಿಜನ್ ಸಮಸ್ಯೆ ಬಗೆಹರಿಯುವುದಿಲ್ಲ. ಜೊತೆಗೆ ಜಿಲ್ಲೆಗಳ ನಡುವಿನ ವೈಮನಸ್ಸು ಹೆಚ್ಚಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ರು.
ಮೈಸೂರಿನಲ್ಲಿ 6 ಸಾವಿರ ಬೆಡ್ಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗುತ್ತಿದ್ದು, ನಮಗೂ ಆಕ್ಸಿಜನ್ ಕೊರತೆ ಉಂಟಾಗಬಹುದು. ಸರ್ಕಾರ ತುರ್ತಾಗಿ ಜಿಲ್ಲಾ ಆಕ್ಸಿಜನ್ ಕೋಟಾ ನಿರ್ಧರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಪ್ರತಾಪ್ ಸಿಂಹ ಹೇಳಿದ್ರು.