ಮೈಸೂರು: ಓದಲು ಸ್ಥಳವಿಲ್ಲದೇ ಪರದಾಡುತ್ತಿದ್ದ ಪ್ರತಿಭಾನಿತ್ವ ವಿದ್ಯಾರ್ಥಿನಿಗೆ ಸೌಲಭ್ಯ ಒದಗಿಸುವಂತೆ ಆಕೆಯ ಶಿಕ್ಷಕಿ ಮಾಡಿದ ಮನವಿಗೆ ಎಲ್.ಜಿ.ಗೆಳೆಯರ ಬಳಗ ಸ್ಪಂದಿಸಿದ್ದು, ಓದಲು ಸೂರು ದೊರಕಿಸಿ ಕೊಟ್ಟಿದೆ.
ಕೆ.ಹೆಮ್ಮನಹಳ್ಳಿ ಗ್ರಾಮದ ನಿವಾಸಿ, ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಆರ್.ರಕ್ಷಿತಾ ಪ್ರತಿಭಾವಂತೆ. ಆದರೆ, ಕಡು ಬಡತನ ಕಾರಣ ಹೆತ್ತವರು ಸಣ್ಣ ಮನೆಯಲ್ಲಿ ವಾಸವಾಗಿದ್ದರು. ಇದರಿಂದ ರಕ್ಷಿತಾ ಆರಾಮವಾಗಿ ಕುಳಿತು ಓದುವುದಕ್ಕೂ ಸಾಧ್ಯವಿಲ್ಲದಂತಹ ಸಂಕಷ್ಟ ಎದುರಾಗಿತ್ತು. ಇದನ್ನರಿತು ವಿದ್ಯಾರ್ಥಿನಿ ಮೇಲೆ ವಿಶೇಷ ಒಲವು ಹಾಗೂ ಕಾಳಜಿ ಹೊಂದಿದ್ದ ಇಂಗ್ಲಿಷ್ ಶಿಕ್ಷಕಿ ಬಿ.ಆರ್.ವಾಣಿ ಆಕೆಯ ಕಷ್ಟಕ್ಕೆ ಕರುಣೆ ತೋರಿದ್ದಾರೆ.
ಪ್ರತಿಭಾವಂತೆಯಾದ ಆಕೆಯ ಓದಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ತಮ್ಮ ಪತಿ ಮಹಾರಾಣಿ ಕಾಲೇಜು ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಡಾ.ಹೇಮಚಂದ್ರ ಅವರಲ್ಲಿ ಸಹಾಯ ಮಾಡುವವರಿದ್ದರೆ ತಿಳಿಸುವಂತೆ ಕೋರಿದ್ದಾರೆ. ಡಾ.ಹೇಮಚಂದ್ರ ಅವರು ತಾವು ಸದಸ್ಯರಾಗಿರುವ ಎಲ್.ಜಿ.ಗ್ರೂಪ್ ಎಂಬ ವಾಟ್ಸಾಪ್ ಗ್ರೂಪ್ಗೆ ಆರ್ಥಿಕ ಸಹಾಯ ಕೋರಿ ಮೆಸೇಜ್ ಮಾಡಿದ್ದಾರೆ. ಇದಕ್ಕೆ ಗ್ರೂಪ್ನ ಅಡ್ಮಿನ್ ಸೋಮಶೇಖರ್ ಸೇರಿದಂತೆ ಗುಂಪಿನ ಸದಸ್ಯರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ನಂತರ ಎಲ್.ಜಿ ಗೆಳೆಯರ ಬಳಗದ ಸದಸ್ಯರು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಅರಿತು ವಿದ್ಯಾರ್ಥಿನಿಯ ಓದಿಗೆ ಅನುಕೂಲವಾಗುವಂತೆ 2 ಲಕ್ಷ ರೂ. ನೀಡಿ ಗಣಗರಹುಂಡಿ ಎಂಬ ಗ್ರಾಮದಲ್ಲಿ ಮನೆಯೊಂದನ್ನು ಬೋಗ್ಯಕ್ಕೆ ಕೊಡಿಸಿದ್ದಾರೆ. ಜೊತೆಗೆ ಓದಿಗೆ ಸಹಾಯವಾಗಲೆಂದು ವಿದ್ಯಾರ್ಥಿನಿಯ ಖಾತೆಗೆ ಸುಮಾರು 40 ಸಾವಿರ ರೂ. ಜಮೆ ಮಾಡಿದ್ದಾರೆ.
ಎಲ್.ಜಿ.ಗೆಳೆಯರ ಬಳಗ, ಶಾಲೆಯ ಮುಖ್ಯಸ್ಥರಾದ ಆರ್.ಕೃಷ್ಣಪ್ಪ ಹಾಗೂ ಸಹೋದ್ಯೋಗಿಗಳು ವಿದ್ಯಾರ್ಥಿನಿಗೆ ನೆರವು ನೀಡಿರುವುದಕ್ಕೆ ಇಂಗ್ಲಿಷ್ ಶಿಕ್ಷಕಿ ಬಿ.ಆರ್.ವಾಣಿ ಕೃತಜ್ಞತೆ ಸಲ್ಲಿಸಿದ್ದಾರೆ. ವಿದ್ಯಾರ್ಥಿನಿ ಆರ್.ರಕ್ಷಿತ , ನನ್ನ ಓದಿಗೆ ಸಹಾಯ ಮಾಡಿದ ಪ್ರತಿಯೊಬ್ಬರ ಋಣ ನನ್ನ ಮೇಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿ ಎಲ್ಲರ ಋಣ ತೀರಿಸುತ್ತೀನಿ ಅಂತಾ ಕೃತಜ್ಞತೆ ಸಲ್ಲಿಸಿದ್ದಾಳೆ.
ಓದಿ: ಸೌರವ್ ಗಂಗೂಲಿಗೆ ಲಘು ಹೃದಯಾಘಾತ: ಐಸಿಯುನಲ್ಲಿ ಪ್ರಾಥಮಿಕ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ