ಮೈಸೂರು: ನಾವು ಯಾವುದೇ ಸರ್ಕಾರವನ್ನ ಟಿಪ್ಪು ಜಯಂತಿ ಮಾಡಿ ಅಂತಾ ಕೇಳಿಲ್ಲ. ರಾಜಕೀಯ ಉದ್ದೇಶಕ್ಕಾಗಿ ಟಿಪ್ಪು ಜಯಂತಿಯನ್ನ ಬಳಸಿಕೊಳ್ತಿದ್ದಾರೆ. ಯಾವುದೇ ಸರ್ಕಾರ ಟಿಪ್ಪು ಜಯಂತಿ ಮಾಡಬೇಕಿಲ್ಲವೆಂದು ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಅಶೋಕ ರಸ್ತೆಯಲ್ಲಿರುವ ಮಿಲಾದ್ ಪಾರ್ಕ್ನಲ್ಲಿ ಟಿಪ್ಪು ಸುಲ್ತಾನ್ 227ನೇ ಗಂಧ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಟಿಪ್ಪು ಎಂತಹ ವ್ಯಕ್ತಿ ಅನ್ನೋದನ್ನ ಇತಿಹಾಸ ನೋಡಿ ತಿಳಿದುಕೊಳ್ಳಲಿ. ಬಿಜೆಪಿಯವರು ಟಿಪ್ಪು ಜಯಂತಿ ಮಾಡೋದು ಬೇಕಾಗಿಲ್ಲ. ಈಗ ಟಿಪ್ಪು ಜಯಂತಿ ರದ್ದು ಮಾಡಿರೋದು ನಮಗೆ ಬೇಸರವಿಲ್ಲ. ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ರದ್ದು ಮಾಡುತ್ತೆ ಅನ್ನೋ ನಿರೀಕ್ಷೆ ಮೊದಲೇ ಇತ್ತು ಎಂದರು.
ಮೈತ್ರಿ ಸರ್ಕಾರ ಕೂಡ ಕಳೆದ ಬಾರಿ ಟಿಪ್ಪು ಜಯಂತಿಯನ್ನ 144 ಸೆಕ್ಷನ್ ಜಾರಿ ಮಾಡಿ ನಾಲ್ಕು ಗೋಡೆ ಮಧ್ಯೆ ಮಾಡಿತ್ತು. ಆಗ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಇಬ್ಬರೂ ಬರಲಿಲ್ಲ. ಇದರಿಂದ ನಾಲ್ಕು ಗೋಡೆಗಳ ಮಧ್ಯೆ ಜಯಂತಿ ನಡೆಯಿತು. ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ನಾವು ಕಳೆದ 29 ವರ್ಷಗಳಿಂದ ಟಿಪ್ಪು ಜಯಂತಿಯನ್ನ ಆಚರಿಸುತ್ತಾ ಬಂದಿದ್ದೇವೆ. ಇನ್ನೂ ಅದ್ದೂರಿಯಾಗಿ ಟಿಪ್ಪು ಜಯಂತಿ ಆಚರಣೆ ಮಾಡುತ್ತೇವೆ. ಇವತ್ತು ಟಿಪ್ಪು ಸುಲ್ತಾನ್ 227ನೇ ಗಂಧ ಉರುಸ್ ಆಚರಿಸುತ್ತಿದ್ದೇವೆ ಎಂದರು.