ಮೈಸೂರು: ಮಠಾಧಿಪತಿಗಳು ಮೀಸಲಾತಿಗಾಗಿ ಹೋರಾಟ ಮಾಡಿ ರಾಜ್ಯವನ್ನು ಜಾತಿಗೆ ಸೀಮಿತಗೊಳಿಸಬೇಡಿ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದರು.
ನಗರದ ಹಾರ್ಡಿಂಗ್ ವೃತ್ತದ ಬಳಿ ಪ್ರತಿಭಟನೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಠಾಧಿಪತಿಗಳು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಪಾಲಿಸಿದರೆ ಮಠದಲ್ಲಿಯೇ ಇರಿ. ಮೀಸಲಾತಿ ಹಾಗೂ ಜಾತಿಗಾಗಿ ಹೋರಾಟಕ್ಕೆ ಬಂದರೆ ನಿಮ್ಮ ಶಕ್ತಿ ಕುಂದುತ್ತದೆ ಎಂದರು.
ಮಠಾಧಿಪತಿಗಳ ಮೀಸಲಾತಿ ಹೋರಾಟಕ್ಕೆ ಬಿ.ಎಸ್.ಯಡಿಯೂರಪ್ಪನವರೇ ಕಾರಣ. ಅವರೇ ಕೆಲವರಿಗೆ ಪಾದಯಾತ್ರೆ ಮಾಡಿ ಎಂದು ಹೇಳಿ ಜಾತಿಯ ವಿಷ ಬೀಜ ಬಿತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ರಾಜ್ಯದಲ್ಲಿ ಯಡಿಯೂರಪ್ಪ ಒಂದು ನಿಮಿಷವೂ ಅಧಿಕಾರದಲ್ಲಿರಲು ಯೋಗ್ಯರಲ್ಲ. ಅವರು ಪ್ರಮಾಣಿಕವಾಗಿದ್ದರೆ ತಕ್ಷಣ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ರಾಜ್ಯವನ್ನು ಜಾತಿ ಆಧಾರಿತವಾಗಿ ಹಾಳು ಮಾಡಬೇಡಿ, ಭಾಷೆಯ ಆಧಾರದ ಮೇಲೆ ಅಭಿವೃದ್ಧಿ ಮಾಡಬೇಕು. ಮಠಾಧಿಪತಿಗಳು ಮುಂದೊಂದು ದಿನ ರಾಜಕಾರಣಕ್ಕೆ ಬರುತ್ತಾರೆ. ಮಠಾಧಿಪತಿಗಳು ರಾಜಕಾರಣಿಗಳಾಗಬೇಡಿ ಎಂದರು.
ವಾಟಾಳ್ ಹತ್ತಿರ ದುಡ್ಡಿಲ್ಲ ಅಂತ ಬಂದಿಲ್ಲ:
ರಾಮ ಮಂದಿರ ಕಟ್ಟಲು ಸಾರ್ವಜನಿಕರ ಬಳಿ ಬಿಜೆಪಿಯವರು ದುಡ್ಡು ಕೇಳಲು ಅಗತ್ಯವಿಲ್ಲ. ಕೇಂದ್ರ ಸರ್ಕಾರವೇ ದುಡ್ಡು ಭರಿಸಬೇಕು. ಇಲ್ಲವಾದರೆ ಯಡಿಯೂರಪ್ಪ ಅವರನ್ನು ಕೇಳಿ 10 ಸಾವಿರ ಕೋಟಿ ರೂ. ಕೊಡುತ್ತಾರೆ. ನನ್ನ ಬಳಿ ದುಡ್ಡು ಇಲ್ಲ ಅಂತ ಅವರು ಕೇಳಲು ಬಂದಿಲ್ಲ ಎಂದರು.
ಉದ್ಭವ್ ಠಾಕ್ರೆಗೆ ಹುಚ್ಚು ಹಿಡಿದಿದೆ:
ರಾಜ್ಯದ ಗಡಿ ಪ್ರದೇಶದಲ್ಲಿ ಮರಾಠಿಗರ ಭಾಷಾ ಆಧಾರದ ಮೇಲೆ ಜಾತಿ ಗಣತಿ ಮಾಡುತ್ತಿದ್ದಾರೆ. ಮಹಾರಾಷ್ಟ್ರ ಸಿಎಂ ಉದ್ಭವ್ ಠಾಕ್ರೆಗೆ ಹುಚ್ಚು ಹಿಡಿದಿದೆ. ಅವರ ಅಪ್ಪ ಬಾಳ ಠಾಕ್ರೆಗೂ ಹುಚ್ಚು ಹಿಡಿದಿತ್ತು ಎಂದು ಹರಿಹಾಯ್ದರು.
ಓದಿ: ನೆರೆ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಕೊರೊನಾ, ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮ: ಸಚಿವ ಕೆ. ಸುಧಾಕರ್
ಕಾವೇರಿ ಪ್ರಾಜೆಕ್ಟ್ ನಿಲ್ಲಿಸಲಿ:
ತಮಿಳುನಾಡಿನಲ್ಲಿ ನಡೆಯುತ್ತಿರುವ ಕಾವೇರಿ ಪ್ರಾಜೆಕ್ಟ್ಅನ್ನು ಅಲ್ಲಿನ ಸರ್ಕಾರ ನಿಲ್ಲಿಸಬೇಕು. ಪ್ರಧಾನಿ ಮೋದಿ ಚುನಾವಣೆಗೋಸ್ಕರ ಏನು ಬೇಕಾದರೂ ಮಾಡುತ್ತಾರೆ ಎಂದು ಕಿಡಿಕಾರಿದರು.