ಮೈಸೂರು: ಜಮೀನಿನೊಂದರಲ್ಲಿ ಅನುಮಾನಾಸ್ಪದವಾಗಿ ಚಿರತೆಯ ಕಳೇಬರ ಪತ್ತೆಯಾಗಿರುವ ಘಟನೆ ನಂಜನಗೂಡು ತಾಲೂಕಿನ ಸಿದ್ದೇಗೌಡನಹುಂಡಿ ಗ್ರಾಮದಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ಸಿದ್ದೇಗೌಡನಹುಂಡಿ ಗ್ರಾಮದ ಶ್ರೀಪಾದ ಎಂಬುವವರ ಜಮೀನಿನಲ್ಲಿ 6 ತಿಂಗಳ ಹೆಣ್ಣು ಚಿರತೆಯ ಕಳೇಬರ ಪತ್ತೆಯಾಗಿದ್ದು, ಈ ಚಿರತೆ ಒಂದು ತಿಂಗಳಿನಿಂದ ಆಗಾಗ ಜಮೀನಿನಲ್ಲಿ ಕಾಣಿಸಿಕೊಳ್ಳುತ್ತಿತ್ತಂತೆ. ಇಂದು ಅದರ ಕಳೇಬರ ಪತ್ತೆಯಾಗಿದೆ.
ಗ್ರಾಮಸ್ಥರು ಅರಣ್ಯ ಇಲಾಖೆಯರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಪಶುವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇದೇ ಗ್ರಾಮದಲ್ಲಿ ಕಳೆದ ವರ್ಷ ಕಿಡಿಗೇಡಿಗಳು 3 ಚಿರತೆಗಳನ್ನು ವಿಷ ಹಾಕಿ ಕೊಂದಿದ್ದರು.
ಈಗ ಚಿರತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದರಿಂದ ವಿಷ ಹಾಕಿ ಕೊಂದಿರಬಹುದೆಂದು ಅನುಮಾನ ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಚಿರತೆ ಹೇಗೆ ಸಾವನ್ನಪ್ಪಿದೆ ಎಂಬ ಮಾಹಿತಿ ಸಿಗಲಿದೆ.