ಮೈಸೂರು: ಶಾಸಕ ಸಾ.ರಾ. ಮಹೇಶ್ ವಿರುದ್ಧ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಡಿದ್ದ ಭೂ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಮರು ತನಿಖೆ ಮಾಡುವಂತೆ ಸರ್ವೇ ಇಲಾಖೆ ಆದೇಶ ಹೊರಡಿಸಿದೆ.
ಮೈಸೂರು ಭೂ ಅಕ್ರಮ ತನಿಖೆಗೆ ಮರು ಜೀವ ಬಂದಿದೆ. ಭೂ ಅಕ್ರಮ ಆರೋಪ ಕೇಳಿಬಂದ ಹಿನ್ನೆಲೆ ಪುನರ್ ಸರ್ವೇ ನಡೆಸಲು ಭೂ ದಾಖಲೆ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದು, ಶಾಸಕ ಸಾ.ರಾ. ಮಹೇಶ್ಗೆ ನೀಡಿರುವ ಕ್ಲೀನ್ ಚೀಟ್ಗೆ ಬ್ರೇಕ್ ಹಾಕಲು ಸರ್ವೇ ಇಲಾಖೆ ಆಯುಕ್ತರು ಮುಂದಾಗಿದ್ದಾರೆ ಎನ್ನಲಾಗ್ತಿದೆ.
ಮೈಸೂರು ಅಧಿಕಾರಿಗಳನ್ನು ಹೊರಗಿಟ್ಟು ಈ ಸರ್ವೇ ಕಾರ್ಯ ನಡೆಯಲಿದೆ. ಭೂದಾಖಲೆಗಳ ಉಪ ನಿರ್ದೇಶಕರಾದ ಮಂಡ್ಯದ ಬಿ.ಜಿ.ಉಮೇಶ್, ತುಮಕೂರಿನ ಸುಜಯ್ ಕುಮಾರ್, ದಾವಣಗೆರೆಯ ಟಿ.ಕೆ. ಲೋಹಿತ್ ಅವರನ್ನು ಮರು ತನಿಖೆ ಮಾಡಲು ನೇಮಕ ಮಾಡಲಾಗಿದ್ದು, 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಆದೇಶ ಹೊರಡಿಸಲಾಗಿದೆ.
ದಟ್ಟಗಳ್ಳಿ, ಆರ್.ಟಿ. ನಗರ, ಯಡಹಳ್ಳಿ, ಲಿಂಗಾಂಬುದಿಪಾಳ್ಯ ಸೇರಿದಂತೆ ಎಲ್ಲಾ ಆರೋಪಗಳ ಬಗ್ಗೆಯೂ ಸರ್ವೇ ಮಾಡುವಂತೆ ಸೂಚನೆ ನೀಡಲಾಗಿದೆ.
ದಟ್ಟಗಳ್ಳಿಯ ಸಾ.ರಾ. ಚೌಲ್ಟ್ರಿಯ ಜಾಗವನ್ನ ಈಗಾಗಲೇ ಸರ್ವೇ ನಡೆಸಿ, ಒತ್ತುವರಿ ಆಗಿಲ್ಲ ಅಂತಾ ಪ್ರಾದೇಶಿಕ ಆಯುಕ್ತರು ವರದಿ ಕೊಟ್ಟಿದ್ದಾರೆ. ಆದ್ರೂ ಸಹ ಚೌಲ್ಟ್ರಿಯನ್ನು ಅಧಿಕಾರಿಗಳು ಮರು ಅಳತೆ ಮಾಡಲಿದ್ದಾರೆ.