ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನ ಸಾವಿರಾರು ಎಕರೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಲಲಿತ ಮಹಲ್ ಪ್ಯಾಲೇಸ್ ಬಳಿ ಇರುವ ಹೆಲಿಪ್ಯಾಡ್ ರಾಜಮನೆತನದ ಒಡೆತನಕ್ಕೆ ಸೇರಿದಂತಾಗಿದೆ.
ಚಾಮುಂಡಿ ಬೆಟ್ಟದ ತಪ್ಪಲಿನ ಕುರುಬಾರಹಳ್ಳಿ ಸೇರಿದಂತೆ 1561.31 ಎಕರೆ ವಿವಾದಿತ ಭೂಮಿಯ ಒಡೆತನವು ಮೈಸೂರಿನ ರಾಜವಂಶಸ್ಥರಿಗಿದೆ ಎಂಬ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದು, ರಾಜ್ಯ ಸರ್ಕಾರಕ್ಕೆ ಹಿನ್ನೆಡೆ ಉಂಟಾಗಿದೆ. ಸರ್ಕಾರಿ ಹೆಲಿಪ್ಯಾಡ್ ಎಂದು ನಂಬಲಾಗಿದ್ದ ಜಾಗ ರಾಜಮನೆತನಕ್ಕೆ ಅಧಿಕೃತವಾಗಿದೆ.
ಹೈಕೋರ್ಟ್ ತೀರ್ಪು ನೀಡಿದಾಗಲೇ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಈ ವಿಚಾರ ಪ್ರಸ್ತಾಪಿಸಿ, ಹೆಲಿಪ್ಯಾಡ್ನ ತಾತ್ಕಾಲಿಕ ಬಳಕೆ ಹಾಗೂ ಗಣ್ಯರ ಬಳಕೆಗೆ ಅಡ್ಡಿಪಡಿಸುವುದಿಲ್ಲ ಎಂದು ಹೇಳಿದ್ದರು. ಇದೀಗ ಮತ್ತೆ ಅವರ ಪರವಾಗಿಯೇ ತೀರ್ಪು ಬಂದಿರುವ ಕಾರಣ ಸರ್ಕಾರವು ಮಂಡಕಳ್ಳಿ ವಿಮಾನ ನಿಲ್ದಾಣವನ್ನೇ ಬಳಸಬೇಕಿದೆ. ಇಲ್ಲವೇ ಬೇರೊಂದು ಸ್ಥಳದಲ್ಲಿ ಹೆಲಿಪ್ಯಾಡ್ ನಿರ್ಮಿಸಬೇಕಿದೆ.
ಏನಿದು ಭೂ ವಿವಾದ:
2 ಸಾವಿರ ಎಕರೆ ಭೂಮಿಯನ್ನು 2010-11ರಲ್ಲಿ ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಬಿ ಖರಾಬು (ಸರ್ಕಾರಿ ಭೂಮಿ) ಭೂಮಿ ಎಂದು ಆದೇಶಿಸಿದ್ದರು. ಆದರೆ, ಕುರುಬಾರಹಳ್ಳಿ ಸೇರಿದಂತೆ ಕೆಲವು ಜಾಗ ಖಾಸಗಿ ಅವರ ಒಡೆತನದಲ್ಲಿತ್ತು. ಇವರು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಈ ಆದೇಶವನ್ನು ಪ್ರಶ್ನಿಸಿದರು. ಬಳಿಕ ಜಿಲ್ಲಾಧಿಕಾರಿಯಾಗಿ ಬಂದ ಪಿ.ಎಸ್.ವಸ್ತ್ರದ್ ಅರ್ಜಿಯ ವಿಚಾರಣೆ ನಡೆಸಿ ಈ ಭೂಮಿಯನ್ನು ಎ ಖರಾಬು ಎಂದು ತೀರ್ಪು ನೀಡಿದ್ದರು.
ಈ ತೀರ್ಪಿಗೆ ಕೂಡ ಕೆಲವರು ಆಕ್ಷೇಪ ವ್ಯಕ್ತಪಡಿಸಿದ ಕಾರಣಕ್ಕಾಗಿ ತೀರ್ಪನ್ನು ಹಿಂದಕ್ಕೆ ಪಡೆಯಲಾಯಿತು. ಜಿಲ್ಲಾಧಿಕಾರಿ ತೀರ್ಮಾನವನ್ನು ರಾಜವಂಶಸ್ಥರು ಹಾಗೂ ಭೂಮಿಯನ್ನು ಅನುಭೋಗಿಸುತ್ತಿರುವವರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್ನಲ್ಲಿ ವಿಚಾರಣೆ ನಡೆಸಿ, ಜಿಲ್ಲಾಧಿಕಾರಿ ಆದೇಶ ಹಿಂಪಡೆಯುವಾಗ ನಿಯಮ ಪಾಲಿಸಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಮರು ಪರಿಶೀಲನೆಗೆ ಸೂಚಿಸಲಾಗಿತ್ತು.
ತನಿಖೆಗೆ ನಿವೃತ್ತ ಐಎಎಸ್ ಅಧಿಕಾರಿ ಜಿ.ಎಸ್.ನಾರಾಯಣ ಸ್ವಾಮಿ ಆಯೋಗ ರಚನೆಯಾಗಿತ್ತು. 2015ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಿ.ಶಿಖಾ 2 ಸಾವಿರ ಎಕರೆಯನ್ನು ಬಿ ಖರಾಬು ಎಂದು ತೀರ್ಪು ನೀಡಿದ್ದರು. ಮತ್ತೆ ಜಿಲ್ಲಾಧಿಕಾರಿ ತೀರ್ಪನ್ನು ಹೈಕೋರ್ಟ್ ವಜಾಗೊಳಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೊರೆಹೋಗಿತ್ತು.
ಸುಪ್ರೀಂಕೋರ್ಟ್ ಆದೇಶ:
ರಾಜ್ಯ ಸರ್ಕಾರದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ರಾಜವಂಶಸ್ಥರ ಪರ ಹೈಕೋರ್ಟ್ ನೀಡಿದ್ದ ತೀರ್ಪನ್ನು ತಳ್ಳಿಹಾಕಲು ಯಾವುದೇ ಕಾರಣ ಕಂಡುಬಂದಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಉಮೇಶ್ ಲಲಿತ್ ಹಾಗೂ ಅಜಯ್ ರಸ್ಟೋಗಿ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಖಾತೆ ಪ್ರಕ್ರಿಯೆ ಪ್ರಾರಂಭವಾಗಿರಲಿಲ್ಲ. ಈಗ ರಾಜಮನೆತನದ ಪರವಾಗಿ ತೀರ್ಪು ಬಂದಿರುವುದರಿಂದ ರಾಜಮನೆತನ ಹಾಗೂ ಭೂಮಿ ಅನುಭೋಗಿಸುತ್ತಿರುವವರಿಗೆ ಖಾತೆ ಮಾಡಿಕೊಡಬೇಕಾದ ಅನಿವಾರ್ಯತೆ ಕಂಡುಬಂದಿದೆ.
ಇದನ್ನೂ ಓದಿ: ಜನರೇ ಎಚ್ಚರ: ಮತ್ತೆ ರಾಜ್ಯದಲ್ಲಿ ಮೂರು ದಿನಗಳ ಕಾಲ ಭಾರಿ ಮಳೆ!