ಮೈಸೂರು: ಸುಮಲತಾ ಬಿಜೆಪಿ ಸೇರುತ್ತಾರೆ ಎಂದರೆ ಅದು ನಮಗೆ ಶಕ್ತಿ ಇದ್ದಂತೆ, ಅವರು ಬರುವುದರಿಂದ ಈ ಭಾಗದಲ್ಲಿ ರಾಜಕೀಯ ಲಾಭವೂ ಸಹ ಆಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ. ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 12 ರಂದು ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ಹೈವೇ ಉದ್ಘಾಟನೆಗೆ ಆಗಮಿಸುತ್ತಾರೆ. ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು, ಮೈಸೂರು ವಿಮಾನ ನಿಲ್ದಾಣದಿಂದ ಮಂಡ್ಯಗೆ ಹೆಲಿಕಾಪ್ಟರ್ನಲ್ಲಿ ಆಗಮಿಸಿ, ಅಲ್ಲಿ 2 ಕಿಲೋ ಮೀಟರ್ ರೋಡ್ ಶೋ ಮಾಡುತ್ತಾರೆ. ನಂತರ ಹೆದ್ದಾರಿಯನ್ನು 50 ಮೀಟರ್ನಷ್ಟು ನಡೆದುಕೊಂಡು ಬಂದು ಉದ್ಘಾಟನೆ ಮಾಡಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮಂಡ್ಯ ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿರುವುದು, ಬಿಜೆಪಿ ಪಾರ್ಟಿಗೆ ಶಕ್ತಿ ಬಂದಂತಾಗಿದೆ. ಅಂಬರೀಶ್ ಜನಪ್ರಿಯ ನಟರಾಗಿದ್ದರು. ಅವರಿಗೆ ಅವಮಾನ ಮಾಡಿದರು ಎಂಬ ಕಾರಣಕ್ಕಾಗಿ ಜನ ಸ್ವಾಭಿಮಾನದಿಂದ ಸೆಟೆದುನಿಂತು, ಅವಮಾನ ಮಾಡಿದವರಿಗೆ ಪಾಠ ಕಲಿಸಿದರು. ಈಗ ಸುಮಲತಾ ಅಂಬರೀಶ್ ಬಗ್ಗೆ ಜನ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ಇವರು ಬಿಜೆಪಿಗೆ ಸೇರುತ್ತಾರೆ ಎಂದರೆ ಇದರಿಂದ ನಮ್ಮ ಪಾರ್ಟಿಗೆ ಶಕ್ತಿ ಬಂದಂತೆ, ಜೊತೆಗೆ ರಾಜಕೀಯ ಲಾಭವು ಆಗುತ್ತದೆ. ಏಕೆಂದರೆ ಸುಮಲತಾ ಮಾಡಿರುವ ಕೆಲಸಗಳು ಹಾಗೂ ಮೋದಿಯವರ ಕೆಲಸಗಳು ಜನರಿಗೆ ತಲುಪಿದ್ದು, ಇದು ಸಹ ಪಕ್ಷಕ್ಕೆ ಸಹಾಯವಾಗುತ್ತದೆ ಎಂದರು.
ಮುಕ್ತ ಚರ್ಚೆಗೆ ಆಹ್ವಾನ: ಬೆಂಗಳೂರು -ಮೈಸೂರು ನಡುವಿನ ಎಕ್ಸ್ಪ್ರೆಸ್ ಹೈವೇ ಕಾಂಗ್ರೆಸ್ ಕಾಲದಲ್ಲಿ ಮಂಜೂರಾಗಿತ್ತು ಎಂಬ ಕಾಂಗ್ರೆಸ್ ಟೀಕೆಗೆ ಉತ್ತರಿಸಿದ ಸಂಸದ ಪ್ರತಾಪ್ ಸಿಂಹ, ಹೈವೇ ಕ್ರೆಡಿಟ್ ಅನ್ನು ಕಾಂಗ್ರೆಸ್ ತೆಗೆದುಕೊಳ್ಳಲು ಹೊರಟಿದೆ. ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಹೈವೇ ಬಿಜೆಪಿ ಸರ್ಕಾರದ ನರೇಂದ್ರ ಮೋದಿಯವರಿಗೆ ಸಲ್ಲಬೇಕು. ಏಕೆಂದರೆ ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದವರು ನರೇಂದ್ರ ಮೋದಿ. ಇದಕ್ಕೆ ಉದ್ಘಾಟನೆ ಮಾಡಲು ಬರುತ್ತಿರುವವರು ನರೇಂದ್ರ ಮೋದಿಯವರೇ. ಇದರ ಕ್ರೆಡಿಟ್ ನಮಗೆ ಸಲ್ಲಬೇಕು.
ಈ ಬಗ್ಗೆ ಮಾಜಿ ಕಾಂಗ್ರೆಸ್ನ ಸಚಿವ ಡಾ. ಮಹಾದೇವಪ್ಪ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನ ಮಾಡುತ್ತೇನೆ. ಬೆಂಗಳೂರು- ಮೈಸೂರು ಹೈವೇ ಕೆಲಸಕ್ಕೆ ಕಾಂಗ್ರೆಸ್ ಒಂಬತ್ತುವರೇ ಪೈಸೆ ಸಹ ನೀಡಿಲ್ಲ. ನಮ್ಮ ಸರ್ಕಾರ 9,500 ಕೋಟಿ ನೀಡಿದೆ. ಈ ಕ್ರೆಡಿಟ್ ನಮಗೆ ಸೇರಬೇಕು ಅಂದರೆ ಹೆದ್ದಾರಿ ನಿರ್ಮಾಣದ ಶ್ರೇಯಸ್ಸು ನರೇಂದ್ರ ಮೋದಿಗೆ ಸಲ್ಲಬೇಕೆಂದು ಪ್ರತಾಪ್ ಸಿಂಹ ಹೇಳಿದರು.
ಹೆದ್ದಾರಿ ಸಂಚಾರಕ್ಕೆ ಸೇಫ್ ಆಗಿದೆ: ಬೆಂಗಳೂರು -ಮೈಸೂರು ಹೆದ್ದಾರಿ ಅವೈಜ್ಞಾನಿಕವಾಗಿ ನಿರ್ಮಾಣವಾಗಿದೆ, ಇದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂಬ ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದ ಸಂಸದ ಪ್ರತಾಪ್ ಸಿಂಹ, ಹೈವೇ ವೈಜ್ಞಾನಿಕವಾಗಿ ನಿರ್ಮಾಣವಾಗಿದೆ. ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಸವಾರರು ಚಲಾಯಿಸಬೇಕು. ಅಪಘಾತಕ್ಕೆ ಚಾಲಕರ ನಿರ್ಲಕ್ಷ್ಯವೇ ಕಾರಣ ಎಂದು ಪ್ರತಿಕ್ರಿಯಿಸಿದರು. ಈ ಬಾರಿ ಹಳೇ ಮೈಸೂರು ಭಾಗದಲ್ಲಿ, ಬಿಜೆಪಿ ನಿರೀಕ್ಷೆಗೂ ಮೀರಿ ಪ್ರಧಾನಿ ಮೋದಿಯವರ ಅಭಿವೃದ್ಧಿ ಕೆಲಸಗಳನ್ನು ನೋಡಿ ಮತ ನೀಡಲಿದ್ದು, ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ಕಾರ್ಯಕ್ಕೆ ಮೆಚ್ಚಿ ನನ್ನ ಬೆಂಬಲ ಬಿಜೆಪಿಗೆ: ಸಂಸದೆ ಸುಮಲತಾ ಘೋಷಣೆ