ಮೈಸೂರು: ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಹಾಗೂ ಮಹದೇಶ್ವರ ಸಕ್ಕರೆ ಕಾರ್ಖಾನೆ ಕಬ್ಬು ಕಟ್ಟಾವು ಸಾಗಾಣಿಕೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಜಿಲ್ಲೆಯಾದ್ಯಂತ ಕಬ್ಬು ಬೆಳೆಗಾರರು ಕಬ್ಬು ಕಟಾವು ವಿಳಂಬವಾಗುತ್ತಿರುವುದರಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಕಾರ್ಖಾನೆ ಜೊತೆ ಒಪ್ಪಂದ ಮಾಡಿಕೊಂಡು 15 ತಿಂಗಳಾದರು ಕಟಾವು ಆಗದೆ ವಿಳಂಬವಾಗುತ್ತಿದೆ. ಇದರಿಂದ ರೈತರು ಕಬ್ಬಿನ ಇಳುವರಿ ನಷ್ಟ ಅನುಭವಿಸುತ್ತಿದ್ದು, ಬ್ಯಾಂಕ್ ಸಾಲ ತೀರಿಸುವಲ್ಲೂ ವಿಫಲರಾಗುತ್ತಿದ್ದಾರೆ ಎಂದು ಕಿಡಿಕಾರಿದರು.
ಅಷ್ಟೆ ಅಲ್ಲದೇ, ಬಣ್ಣಾರಿ ಅಮ್ಮನ್ ಹಾಗೂ ಮಹದೇಶ್ವರ ಸಕ್ಕರೆ ಕಾರ್ಖಾನೆಗಳು ಸ್ಥಳೀಯ ಕಬ್ಬನ್ನು ಬಿಟ್ಟು, ಹೊರಗಡೆ ಜಿಲ್ಲೆಗಳಿಂದ ಲಾರಿಗಳ ಮೂಲಕ ಕಬ್ಬನ್ನು ತಂದು ಅರೆಯುತ್ತಿರುವುದರಿಂದ ಸ್ಥಳೀಯ ಕಬ್ಬು ಬೆಳೆಗಾರರು ಬೀದಿಗೆ ಬೀಳುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ಏಷಿಯನ್ ಫೆಸಿಪಿಕ್ ರಾಷ್ಟ್ರಗಳ ಜೊತೆ ಒಪ್ಪಂದ ಮಾಡಿಕೊಂಡು ಕಡಿಮೆ ಬೆಲೆಗೆ ಹಾಲಿನ ಉಪ ಉತ್ಪನ್ನಗಳನ್ನು ವಿದೇಶದಿಂದ ಆಮದು ಮಾಡಿಕೊಂಡು ದೇಶದಲ್ಲಿ ಹೈನುಗಾರಿಕೆ ನಡೆಸುತ್ತಿರುವ ರೈತರಿಗೆ ಮಾರಕವಾಗುವ ಈ ನೀತಿಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಭಾಗ್ಯರಾಜ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.