ಮೈಸೂರು: ಮಾರಣಾಂತಿಕ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಇಲ್ಲಿನ ಕೆ ಆರ್ ಆಸ್ಪತ್ರೆ ವೈದ್ಯರು ಜೀವ ಉಳಿಸಿದ್ದಾರೆ.
ಅಪರೂಪದ ಕ್ಯಾನ್ಸರ್ ಕಾಯಿಲೆಯಾದ ರೆಟ್ರೋಪರಿಟೋನಿಯಲ್ ಲೈಪೋಸಾರ್ಕೋಮದಿಂದ ಬಳಲುತ್ತಿದ್ದ ಸುಮಾರು 65 ವರ್ಷದ ವೃದ್ಧರೊಬ್ಬರು ಕೆ ಆರ್ ಆಸ್ಪತ್ರೆಗೆ ದಾಖಲಾಗಿದ್ದರು. ಕ್ಯಾನ್ಸರ್ ಬಾಧಿತರಲ್ಲಿ ಕೇವಲ ಶೇ.1ರಷ್ಟು ಜನರಲ್ಲಿ ಕಾಣಿಸಿಕೊಳ್ಳುವ ಇದು, ದೇಹದ ಅಂಗಗಳಿಗೆ ಅತಿವೇಗವಾಗಿ ಹರಡಿ ಕೆಲವೇ ತಿಂಗಳಲ್ಲಿ ಜೀವಕ್ಕೆ ಕುತ್ತು ತರುವ ಕಾಯಿಲೆ ಇರುವುದು ಪರೀಕ್ಷೆಯಲ್ಲಿ ಪತ್ತೆಯಾಗಿತ್ತು.
ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ .ಬಿ.ಎನ್. ಆನಂದ ರವಿ ನೇತೃತ್ವದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಆರ್.ಡಿ. ಮಂಜುನಾಥ್, ಡಾ. ದೀಪ, ಅರವಳಿಕೆ ತಜ್ಞರಾದ ಡಾ. ಶ್ರೀನಿವಾಸ್, ಡಾ. ಮಾಲಿನಿ ಅವರನ್ನೊಳಗೊಂಡ ತಜ್ಞ ವೈದ್ಯರ ತಂಡವು ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಿ, ಸುಮಾರು 7.5 ಕೆಜಿ ತೂಕದ ಕ್ಯಾನ್ಸರ್ ಗಡ್ಡೆಯನ್ನು ಹೊರ ತೆಗೆಯುವುದರಲ್ಲಿ ಯಶಸ್ಸಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಡಾ. ಬಿ ಎನ್ ಆನಂದರವಿ, 65 ವರ್ಷದ ರೋಗಿ ಹೊಟ್ಟೆಯ ಮುಂಭಾಗದಲ್ಲಿದ್ದ ಹಲವು ಸೌಮ್ಯವಾದ ಕೊಬ್ಬಿನ ಗ್ರಂಥಿಗಳು, ಕಾಲಾಂತರದಲ್ಲಿ ಹೊಟ್ಟೆಯ ಒಳಭಾಗದಲ್ಲಿ ಕ್ಯಾನ್ಸರ್ ಕೊಬ್ಬಿನ ಗ್ರಂಥಿಯಾಗಿ ಪರಿವರ್ತನೆಗೊಂಡಿದ್ದವು. ಶಸ್ತ್ರಚಿಕಿತ್ಸೆ ಸಮಯದಲ್ಲಿ ಕ್ಯಾನ್ಸರ್ ಗಡ್ಡೆಯ ಎಡಭಾಗದ ಮೂತ್ರಪಿಂಡಕ್ಕೆ ಹರಡಿದ್ದ ಕಾರಣ ಅದನ್ನು ತೆಗೆಯಬೇಕಾದ್ದರಿಂದ ಎಲ್ಟಿಇ ರಾಡಿಕಲ್ ನೆಫ್ರೆಕ್ಟಮಿಯನ್ನು ಸಹ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಸದ್ಯ ರೋಗಿಯ ಸ್ಥಿತಿ ಸ್ಥಿರವಾಗಿದೆ ಎಂದಿದ್ದಾರೆ.
ಕ್ಯಾನ್ಸರ್ ಕಾಯಿಲೆಗಳಿಗೆ ಅಹಾರ ಪದ್ಧತಿ, ಕಲುಷಿತ ಪರಿಸರ, ಅನುವಂಶಿಕತೆ ಹಾಗೂ ಬದಲಾಗುತ್ತಿರುವ ಜೀವನ ಶೈಲಿಯೇ ಕಾರಣ ಎಂದು ವೈದ್ಯರಾದ ಡಾ. ಬಿ ಎನ್ ಆನಂದ ರವಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ವೈದ್ಯರ ಬಳಿ ಹೋಗುವ ಮುನ್ನ ಈ ವಿಷಯಗಳನ್ನು ಮರೆಯದಿರಿ