ಮೈಸೂರು: ಪೊಲೀಸ್ ಕಾನ್ಸ್ಟೇಬಲ್ವೊಬ್ಬರು ನನ್ನನ್ನು ನಾಲ್ಕು ವರ್ಷಗಳ ಕಾಲ ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಇದೀಗ ಮೋಸ ಮಾಡಿದ್ದಾರೆ ಎಂದು ಆರೋಪಿಸಿರುವ ವಿದ್ಯಾರ್ಥಿನಿ ಮೈಸೂರು ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಾನ್ಸ್ಟೇಬಲ್ ರಂಗಸ್ವಾಮಿ ಮತ್ತು ಆತನ ಕುಟುಂಬದ ವಿರುದ್ಧ ದೂರು ನೀಡಿದ್ದು, ಮದುವೆ ಮಾಡಿಕೊಳ್ಳುವಂತೆ ಬಲವಂತ ಮಾಡಿದರೆ ಕೊಲೆ ಮಾಡುವುದಾಗಿ ರಂಗಸ್ವಾಮಿ ಹಾಗೂ ಅವರ ಸ್ನೇಹಿತರು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದೂರಿನ ವಿವರ: ಪಿರಿಯಾಪಟ್ಟಣ ತಾಲೂಕಿನ ಆಲನಹಳ್ಳಿ ಗ್ರಾಮದ ನಾನು ಮತ್ತು ಅದೇ ಗ್ರಾಮದ ಕಾನ್ಸ್ಟೇಬಲ್ ರಂಗಸ್ವಾಮಿ ಕಳೆದ ಹಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ನಾನು ಬಿಎಸ್ಸಿ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿದ್ದು ರಂಗಸ್ವಾಮಿ ತನ್ನನ್ನು ಮದುವೆ ಆಗುವುದಾಗಿಯೂ ಹೇಳಿದ್ದರು. ಆದರೆ, ಈ ನಡುವೆ ನನ್ನ ಮನೆಯವರು ಬೇರೆ ಹುಡುಗನ ಜೊತೆ ನಿಶ್ಚಿತಾರ್ಥ ನಿಶ್ಚಯ ಮಾಡಿದ್ದರು. ಆಗ ರಂಗಸ್ವಾಮಿಯವರೇ ಮಧ್ಯಪ್ರವೇಶಿಸಿ ತನ್ನನ್ನೇ ಮದುವೆಯಾಗುವುದಾಗಿ ಹೇಳಿದ್ದರು. ನಮ್ಮ ಪ್ರೀತಿಯ ವಿಚಾರ ತಿಳಿದಿದ್ದರಿಂದ ನಿಶ್ಚಿತಾರ್ಥ ಕೂಡ ನಿಲ್ಲಿಸಲಾಗಿತ್ತು. ಆದರೆ, ಮದುವೆಯಾಗುವುದಾಗಿ ಹೇಳಿದ್ದ ರಂಗಸ್ವಾಮಿ ಇದೀಗ ನನಗೆ ಸಿಗುತ್ತಿಲ್ಲ. ಸರಿಯಾಗಿ ಮಾತನಾಡುತ್ತಿಲ್ಲ. ನಮ್ಮ ಮದುವೆ ಬಗ್ಗೆ ಕೇಳಿದರೆ ಬೆದರಿಕೆ ಹಾಕುತ್ತಿದ್ದಾರೆಂದು ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿದ್ದಾರೆ.
ಒತ್ತಾಯದ ಬಳಿಕ ಗ್ರಾಮದ ಯಜಮಾನರ ಸಮ್ಮುಖದಲ್ಲೇ ರಂಗಸ್ವಾಮಿ ಕುಟುಂಬದವರು ಮದುವೆಗೆ ಮಾತುಕತೆ ನಡೆಸಿದ್ದರು. ಅವರಿಗೆ ವರದಕ್ಷಿಣೆಯಾಗಿ ಪಿರಿಯಾಪಟ್ಟಣದಲ್ಲಿರುವ ನಿವೇಶನ, 100 ಗ್ರಾಂ ಚಿನ್ನಾಭರಣ ಹಾಗೂ 3 ಲಕ್ಷ ರೂ. ನಗದು ನೀಡಲು ಹಿರಿಯರ ಸಮ್ಮುಖದಲ್ಲಿ ಒಪ್ಪಲಾಗಿತ್ತು. ಆದರೆ, ರಂಗಸ್ವಾಮಿ ಕುಟುಂಬದವರು ನಮ್ಮ ಮನೆಗೆ ಬಂದು 5 ಲಕ್ಷ ರೂ. ಕೊಟ್ಟರೆ ಮಾತ್ರ ಮದುವೆ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೇ ತನ್ನನ್ನು ಮದುವೆಯಾದರೆ ಯಾವುದೇ ಲಾಭವಿಲ್ಲವೆಂದೂ ಸಹ ಹೇಳಿ ಹೋಗಿದ್ದಾರೆ. ಅಲ್ಲದೇ ಇದೀಗ ರಂಗಸ್ವಾಮಿಗೆ ಬೇರೆ ಕಡೆ ಹುಡುಗಿಯನ್ನು ನೋಡಿ ಮದುವೆ ಮಾಡುತ್ತೇವೆಂದು ಹೇಳುತ್ತಿದ್ದಾರೆ. ರಂಗಸ್ವಾಮಿಗೆ ಮದುವೆ ಮಾಡಿಕೊಳ್ಳುವಂತೆ ಬಲವಂತಪಡಿಸಬಾರದು ಎಂದು ತನಗೆ ಬೆದರಿಕೆ ಹಾಕುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವಿದ್ಯಾರ್ಥಿನಿ ನೀಡಿದ ದೂರಿನನ್ವಯ, ಕಾನ್ಸ್ಟೇಬಲ್ ರಂಗಸ್ವಾಮಿ, ಆತನ ತಂದೆ-ತಾಯಿ ಸೇರಿದಂತೆ ಕುಟುಂಬ ಮತ್ತು ಆತನ ಸ್ನೇಹಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮಗನ ಮದುವೆಯಲ್ಲಿ ಅಪ್ಪನಿಗೆ ಪ್ರೇಮಾಂಕುರ, ನಂತರ ಪ್ರೇಮಿಗೆ ವಂಚನೆ ಆರೋಪ ; ಪೊಲೀಸ್ ಠಾಣೆ ಮೆಟ್ಟಿಲೇರಿದ ವೃದ್ಧೆ!