ಮೈಸೂರು: ಕಣ್ಣಿನಲ್ಲಿ ಕಲ್ಲಿನ ಚೂರು ಉದುರುತ್ತಿರುವ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಬೆಂಕಿಪುರ ಗ್ರಾಮದ ವಿಜಯ ಎಂಬ ಮಹಿಳೆ ತನ್ನ ಕಷ್ಟವನ್ನು ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ.
ಬೆಂಕಿಪುರ ಗ್ರಾಮದ ವಿಜಯ ಎಂಬ ಮಹಿಳೆಯ ಕಣ್ಣಿನಿಂದ ಕಲ್ಲಿನ ಚೂರು ( ಕಲ್ಲಿನಂತೆ ಗಟ್ಟಿಯಾಗಿರುವ ವಸ್ತುಗಳು) ಉದುರುತ್ತಿದ್ದು, ಈ ಬಗ್ಗೆ ನಗರದ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ನೇತ್ರ ತಜ್ಞರ ಬಳಿ ಪರೀಕ್ಷೆ ಮಾಡಿಸಿದ್ದಾರೆ. ಇಂದು ಸಂಜೆ ವರದಿ ಬರಲಿದ್ದು, ವರದಿಯ ಆಧಾರದ ಮೇಲೆ ಕಾರಣ ಗೊತ್ತಾಗಲಿದೆ ಎಂದು ಮಹಿಳೆಗೆ ತಿಳಿಸಿದ್ದಾರೆ.
ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ವಿಜಯ, 'ತಲೆಯ ಮೆದುಳಿನ ಭಾಗದಲ್ಲಿ ನೋವು ಬರುತ್ತಿತ್ತು, ತಲೆಯಿಂದ ಏನೋ ಉರುಳಿಕೊಂಡು ಹೋದ ಹಾಗೆ ಭಾಸವಾಗುತ್ತಿತ್ತು, ಮುಖವೆಲ್ಲಾ ಚುಚ್ಚಿದ ರೀತಿ ಅನಿಸಿ ಕಣ್ಣಿನ ಮುಂಭಾಗದಲ್ಲಿ ಕಲ್ಲಿನ ಚೂರಿನ ಹಾಗೆ ಬೀಳುತ್ತಿದೆ. ಕಳೆದ ಶನಿವಾರ ಮೊದಲು ಹೀಗೆ ಕಾಣಿಸಿಕೊಂಡಿದ್ದು, ಇಲ್ಲಿಯವರೆಗೆ ಸುಮಾರು 200 ಕ್ಕೂ ಹೆಚ್ಚು ಕಲ್ಲುಗಳು ಕಣ್ಣಿನಿಂದ ಬಿದ್ದಿದೆ. ಈ ವಿಚಾರವನ್ನು ಊರಿನ ಜನರಿಗೆ ಹೇಳಿದರೆ ನಾಟಕ ಆಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಕಣ್ಣು ಚೆನ್ನಾಗಿಯೇ ಕಾಣಿಸುತ್ತಿದೆ. ಆದರೆ ನೋವು ಜಾಸ್ತಿ ಬರುತ್ತದೆ' ಎಂದರು.
ವಿಜಯ ಅವರ ತಾಯಿ ಶಿವಮ್ಮ ಮಾತನಾಡಿ, 'ನನ್ನ ಮಗಳಿಗೆ ಇದು ಹೇಗೆ ಆಯಿತು ಎಂಬುದು ಗೊತ್ತಿಲ್ಲ. ಕಳೆದ ಎಂಟು ದಿನಗಳಿಂದ ಎರಡು ಬಾರಿ ಕಲ್ಲಿನ ಚೂರುಗಳು ಉದುರುತ್ತಿವೆ. ಡಾಕ್ಟರ್ ಇದನ್ನು ನೋಡಿ ಆಶ್ಚರ್ಯ ಪಟ್ಟರು. ಬಡವರಿಗೆ ದೇವರು ಈ ರೀತಿಯ ಕಷ್ಟ ಕೊಡಬಾರದು, ಯಾರಾದರೂ ಸಹಾಯ ಮಾಡಿ' ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮಹಿಳೆಯ ಕಣ್ಣಿನಿಂದ ಉದುರುತ್ತಿವೆ ಕಲ್ಲು ಚೂರುಗಳು!
ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯರೊಬ್ಬರು, ಈ ರೀತಿಯ ಪ್ರಕರಣ ನನಗೂ ಆಶ್ಚರ್ಯ ತಂದಿದೆ. ಪರೀಕ್ಷೆಯ ವರದಿಗಳು ಬಂದ ನಂತರ ಕಾರಣ ಖಚಿತವಾಗಿ ಗೊತ್ತಾಗಲಿದೆ. ನಮಗೂ ಈ ರೀತಿಯ ಪ್ರಕರಣ ಮೊದಲನೆಯದು. ಮಹಿಳೆ ಕಲ್ಲಿನ ಚೂರುಗಳನ್ನು ಕಣ್ಣಿನಲ್ಲಿ ಹಾಕಿ ಕೊಳ್ಳುತ್ತಿರಬಹುದು ಅಥವಾ ಚಿಕ್ಕ ವಯಸ್ಸಿನಲ್ಲಿ ಮಣ್ಣು ತಿನ್ನುವ ಅಭ್ಯಾಸ ಇರಬಹುದಾ ಎಂದು ಕೇಳಿದಾಗ ಇಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ವರದಿ ಬಂದ ನಂತರ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.