ಮೈಸೂರು: ಈಗಾಗಲೇ ಸರ್ವೇ ಮಾಡಿದ ಸ್ಥಳವನ್ನು ಮತ್ತೆ ಸರ್ವೇ ಮಾಡಲು ಮನೀಶ್ ಮೌದ್ಗಿಲ್ಗೆ ಅಧಿಕಾರ ಕೊಟ್ಟವರು ಎಂದು ಪ್ರಶ್ನಿಸುವ ಮೂಲಕ ಶಾಸಕ ಸಾ.ರಾ. ಮಹೇಶ್ ಪರವಾಗಿ ಸಚಿವ ಎಸ್.ಟಿ. ಸೋಮಶೇಖರ್ ಬ್ಯಾಟಿಂಗ್ ಮಾಡಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಸರಸ್ವತಿಪುರಂನಲ್ಲಿರುವ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಪುತ್ಥಳಿಗೆ ಮಾರ್ಲಾಪಣೆ ಮಾಡಿ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಐಎಎಸ್ ಅಧಿಕಾರಿಗಳು ದ್ವೇಷದ ರಾಜಕಾರಣ ಮಾಡಬಾರದು. ಈಗಾಗಲೇ ಪ್ರಾದೇಶಿಕ ಆಯುಕ್ತರು ಸರ್ವೇ ಮಾಡಿ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಆದರೆ, ಅದೇ ಸ್ಥಳವನ್ನು ಮತ್ತೆ ಯಾಕೆ ಸರ್ವೇ ಮಾಡಬೇಕು. ರಾಜಕಾರಣಿಗಳು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಅಪ್ರಾಮಾಣಿಕರು ಎಂದು ಬಿಂಬಿಸಲಾಗುತ್ತೆ. ಅಧಿಕಾರಿಗಳು ರಾಜಕಾರಣಿಗಳನ್ನು ಪ್ರಶ್ನಿಸಿದರೆ ಪ್ರಾಮಾಣಿಕರೆಂದು ಬಿಂಬಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಭೂ ಅಕ್ರಮ ಆರೋಪ: ಮರು ತನಿಖೆ ಮಾಡುವಂತೆ ಆದೇಶ ಹೊರಡಿಸಿದ ಸರ್ವೇ ಇಲಾಖೆ
ಈ ಬಾರಿ ಸರಳ ದಸರಾ:
ಕೊರೊನಾ ಮೂರನೇ ಅಲೆ ನೋಡಿಕೊಂಡು ದಸರಾ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುವುದು. ಅದ್ಧೂರಿ ದಸರಾ ಮಾಡುವುದಿಲ್ಲ, ಸರಳವಾಗಿ ದಸರಾ ಆಚರಣೆ ಮಾಡುತ್ತೇವೆ. ಈಗಾಗಲೇ ಮುಖ್ಯಮಂತ್ರಿಗಳು ಸಭೆ ಮಾಡಿ ಮಾಹಿತಿ ನೀಡಿದ್ದಾರೆ. ಮೈಸೂರು, ಚಾಮರಾಜನಗರ, ಶ್ರೀರಂಗಪಟ್ಟಣ ದಸರಾಗೆ 6 ಕೋಟಿ ರೂ. ಬಿಡುಗಡೆ ಮಾಡಲಿದ್ದಾರೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.