ಮೈಸೂರು: ಕೋವಿಡ್ ನೆರವಿನ ಅಂಗವಾಗಿ ಮೈಸೂರು ವಿಭಾಗದಲ್ಲಿ ‘ಆರ್ಥಿಕ ಸ್ಪಂದನ’ಕ್ಕೆ ಇಂದು ಸಹಕಾರ ಇಲಾಖೆ ಮೂಲಕ ಚಾಲನೆ ನೀಡುತ್ತಿದ್ದೇವೆ ಎಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಇದರ ವ್ಯಾಪ್ತಿಗೆ 8 ಜಿಲ್ಲೆಗಳು ಬರಲಿದ್ದು, ರೈತರು, ಸಣ್ಣ ರೈತರು, ಉದ್ದಿಮೆದಾರರು, ವ್ಯಾಪಾರಸ್ಥರು ಹೀಗೆ ಹಲವು ವಿಭಾಗಗಳಲ್ಲಿ ಸಾಲ ನೀಡಲಾಗುತ್ತದೆ. ಇದರಡಿಯಲ್ಲಿ ವಾಹನ ಹಾಗೂ ಹಸು ಸಾಕಾಣಿಕೆಗೂ ಸಾಲ ನೀಡಲಾಗುತ್ತದೆ. ಇದಕ್ಕೋಸ್ಕರ 8,600 ಕೋಟಿ ರೂಪಾಯಿಯನ್ನು ನಿಗದಿಪಡಿಸಲಾಗಿದೆ ಎಂದಿದ್ದಾರೆ.
ಗಾಂಧಿ ಜಯಂತಿ ಹಿನ್ನೆಲೆ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಆರ್ಥಿಕ ಸ್ಪಂದನ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಒಟ್ಟು ನಾಲ್ಕು ವಿಭಾಗಗಳ ಮೂಲಕ 39 ಸಾವಿರ ಕೋಟಿ ರೂಪಾಯಿ ಸಾಲವನ್ನು ನೀಡಲಾಗುತ್ತದೆ ಎಂದು ತಿಳಿಸಿದ ಸಚಿವರು, ಮೈಸೂರನ್ನು ಬೃಹತ್ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಬೇಕು ಎಂಬ ಬೇಡಿಕೆ ಇದೆ. ಹೀಗಾಗಿ ಇಲ್ಲಿನ ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಸೇರಿಸಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
8 ಗ್ರಾಮ ಪಂಚಾಯಿತಿಗಳಿಗೆ ಅರ್ಹತೆ ಇದೆ. ಜನಸಂಖ್ಯೆ ಆಧಾರದ ಮೇಲೆ ಬೃಹತ್ ಮಹಾನಗರ ಪಾಲಿಕೆಯಾಗಿ ಪರಿವರ್ತಿಸಬೇಕೆ ಎಂಬ ಬಗ್ಗೆ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಜಿಲ್ಲಾಧಿಕಾರಿಗಳ ವರ್ಗಾವಣೆಯಲ್ಲಿ ಯಾವುದೇ ಗೊಂದಲವಿಲ್ಲ. ಇದು ಸರ್ಕಾರದ ನಿರ್ಧಾರವಾಗಿದ್ದು, ನಾವು ಆ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಈಗಿನ ಜಿಲ್ಲಾಧಿಕಾರಿಗಳೂ ಸಹ ಕರ್ನಾಟಕದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ ಕನ್ನಡಿಗರೇ ಬೇಕು ಎಂದು ಐಎಎಸ್ ಅಧಿಕಾರಿಗಳ ವಿಷಯದಲ್ಲಿ ಹೇಳಲಾಗದು ಎಂದು ಸೋಮಶೇಖರ್ ಹೇಳಿದರು.