ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳ ತಲೆದಂಡವಾಗುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸುಳಿವು ನೀಡಿದರು.
ಲಲಿತಾ ಮಹಲ್ ಪ್ಯಾಲೇಸ್ ಹೋಟೆಲ್ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಅತ್ಯಾಚಾರ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕೇಸ್ ಪರಿಶೀಲನೆಗೆ ಎಡಿಜಿಪಿ ಅವರನ್ನೇ ಸರ್ಕಾರ ನಿಯೋಜಿಸಿದೆ. ಗೃಹ ಸಚಿವರೇ ಮೈಸೂರಿಗೆ ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ ಎಂದರು.
ಶೂಟ್ ಔಟ್, ಗ್ಯಾಂಗ್ರೇಪ್ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಎಡಿಜಿಪಿ ವರದಿ ನಂತರ ಪೊಲೀಸರ ನಿರ್ಲಕ್ಷ್ಯ ಕಂಡು ಬಂದರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಬಿಡುವುದಿಲ್ಲ ಎಂದು ಹೇಳಿದರು.
ಸಾರ್ವಜನಿಕರ ಭಾವನೆಗೆ ಸರ್ಕಾರ ಸ್ಪಂದಿಸಬೇಕಾಗುತ್ತದೆ. ನಗರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಅನಿವಾರ್ಯವಾಗಿದೆ ಎನ್ನುವ ಮೂಲಕ ಕಮಿಷನರ್ ಹಾಗೂ ಡಿಸಿಪಿಗಳ ವರ್ಗಾವಣೆ ಸುಳಿವು ನೀಡಿದರು.
ಮೈಸೂರಿನ ಪ್ರತಿಷ್ಠಿತ ಲಲಿತ ಮಹಲ್ಗೆ ಶತಮಾನೋತ್ಸವ ಸಂಭ್ರಮ:
1921ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಾಣ ಮಾಡಿರುವ ಲಲಿತ್ ಮಹಲ್ ಶತಮಾನೋತ್ಸವದ ಅಂಗವಾಗಿ ಹಲವು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ಲಲಿತ್ ಮಹಲ್ ಮುಂಭಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಾಣ ಮಾಡಲಾಗುವುದು. ಮಹಾರಾಜರ ಕೊಡುಗೆ ಹಾಗೂ ಸಾಧನೆ ಸಾರುವಂತಹ ತಾತ್ಕಾಲಿಕ ಮ್ಯೂಸಿಯಂ ನಿರ್ಮಾಣ ಮಾಡಲಾಗುವುದು. ಏಳು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು, ಈ ಕಾರ್ಯಕ್ರಮಗಳಿಗೆ ಸ್ಥಳೀಯರಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಅನುದಾನ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ. ನ.21ರಿಂದ 7 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು, ಲೈಟ್ ಅಂಡ್ ಮ್ಯೂಸಿಕ್ ಕಾರ್ಯಕ್ರಮ ಕೂಡ ಇರಲಿದೆ. ಅಕ್ಟೋಬರ್ ಒಳಗೆ ಕಟ್ಟಡದ ಬಣ್ಣ ಮತ್ತು ಇತರೆ ಕಾಮಗಾರಿ ಮುಕ್ತಾಯವಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರವಾಸೋದ್ಯಮ ಸಚಿವರಿಂದ ಕಾರ್ಯಕ್ರಮ ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು.
ಓದಿ: Mysore Gangrape Case: ನಿರ್ಜನ ಪ್ರದೇಶಕ್ಕೆ ವಿದ್ಯಾರ್ಥಿನಿ ಹೋಗಬಾರದಿತ್ತು ಎಂದ ಗೃಹ ಸಚಿವ ಜ್ಞಾನೇಂದ್ರ!