ಮೈಸೂರು: ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಮೈಸೂರು ಧಾನ್ಯ ವರ್ತಕರ ಸಂಘದ ವತಿಯಿಂದ ರೈತರಿಗಾಗಿ ಪ್ರಾರಂಭಿಸಲಾಗುತ್ತಿರುವ ಭೋಜನಾಯವನ್ನು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಉದ್ಘಾಟಿಸಿದರು.

ರೈತರ ಕ್ಯಾಂಟೀನ್ ಆದ ಭೋಜನ ಮಂದಿರವನ್ನು ಪರಿಶೀಲಿಸಿದ ಸಚಿವದ್ವಯರು, ಆಹಾರ ತಯಾರಿಕೆಯ ಶುಚಿತ್ವ ಗಮನಿಸಿ, ರೈತರಿಗೆ ಸ್ವತಃ ಉಪಾಹಾರ ಬಡಿಸಿದರು.
ನಂತರ ಮಾತನಾಡಿದ ಸಚಿವ ಸೋಮಶೇಖರ್, ಎಪಿಎಂಸಿ ಭೇಟಿ ವೇಳೆ ಕೋಲ್ಡ್ ಸ್ಟೋರೇಜ್ಗಾಗಿ ಅನುಮತಿ ಕೋರಲಾಗಿತ್ತು. ಅದಕ್ಕೂ ಈಗ ಅನುಮತಿ ನೀಡಲಾಗಿದೆ. ಎಪಿಎಂಸಿ ಅಭಿವೃದ್ಧಿಗೆ ಅನುದಾನ ಬೇಕೆಂದು ಸ್ಥಳೀಯ ಶಾಸಕ ಬಳಿ ಹಲವರು ಕೇಳಿಕೊಂಡಿದ್ದರು. ಅದಕ್ಕಾಗಿ ಸರ್ಕಾರದಿಂದ 4 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆರಂಭಿಸಲಾಗಿರುವ ಕ್ಯಾಂಟೀನ್ಗಾಗಿ ತಾತ್ಕಾಲಿಕವಾಗಿ ಜಾಗ ನೀಡಲು ಎಪಿಎಂಸಿ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ. ಇಲ್ಲಿ ಕ್ಯಾಂಟೀನ್ನ ನಿರ್ವಹಣೆ, ಗುಣಮಟ್ಟ ಹಾಗೂ ರೈತರೆಲ್ಲರಿಗೂ ಆಹಾರ ಸಿಗುತ್ತದೆಯೇ ಎಂಬ ಅಂಶವನ್ನು ಕೆಲ ಸಮಯಗಳ ಕಾಲ ನಿಗಾ ವಹಿಸಲಾಗುತ್ತದೆ. ಅವರ ಸೇವೆ ತೃಪ್ತಿಕರವಾಗಿದ್ದರೆ ಜಾಗದ ಖಾಯಂ ಮಂಜೂರಾತಿಗೆ ನಿರ್ಧರಿಸಲಾಗುವುದು ಎಂದು ಭರವಸೆ ನೀಡಿದರು.
ಮೃಗಾಲಯಕ್ಕೆ ಸುಧಾಮೂರ್ತಿ ಅವರಿಂದ 20 ಲಕ್ಷ:
ಮೃಗಾಲಯಕ್ಕೆ ದೇಣಿಗೆ ನೀಡುವ ಸಂಬಂಧ ಇನ್ಫೋಸಿಸ್ ಫೌಂಡೇಶನ್ನ ಸುಧಾಮೂರ್ತಿ ಅವರಿಗೆ ಪತ್ರ ಬರೆದಿದ್ದೇನೆ. ಅವರೂ ಸಹ ಅದಕ್ಕೆ ಪ್ರತಿಯಾಗಿ ಪತ್ರ ಬರೆದು 20 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದಾರೆ. ಜೊತೆಗೆ ಅನಿವಾಸಿ ಭಾರತೀಯರು ಹಾಗೂ ಅಕ್ಕ ಸಂಸ್ಥೆಗೂ ಕೇಳಿಕೊಂಡಿದ್ದು, ಅವರಿಂದಲೂ ಕೊಡುಗೆ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.