ಮೈಸೂರು : ಆಸ್ತಿ ವಿಚಾರವಾಗಿ ನಡೆದ ಗಲಾಟೆಯಲ್ಲಿ ಮಗನೊಬ್ಬ ತಂದೆಯ ಮೇಲೆಯೇ ಏರ್‌ಗನ್‌ನಿಂದ ಗುಂಡು ಹಾರಿಸಿರುವ ಘಟನೆ ಮೈಸೂರು ಜಿಲ್ಲೆ ವಿಜಯನಗರದ 3ನೇ ಹಂತದಲ್ಲಿ ಭಾನುವಾರ ನಡೆದಿದೆ.
ಶಿವಕುಮಾರ್ (50) ಎಂಬುವರು ಹಲ್ಲೆಗೊಳಗಾದವರು. ಇವರ ವಿರುದ್ಧ ನಗರದ ಹೊರವಲಯದಲ್ಲಿ ಪತ್ತೆಯಾದ 'ನಕಲಿ ನಂದಿನಿ ತುಪ್ಪ' ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಕೇಳಿ ಬಂದಿತ್ತು.
ಮೊದಲಿನಿಂದಲೂ ಶಿವಕುಮಾರ್, ಅವರ ಪತ್ನಿ ವನಿತಾ ಹಾಗೂ ಪುತ್ರ ಮೃಣಾಲ್ (21) ಎಂಬುವರ ನಡುವೆ ಆಸ್ತಿ ವಿಚಾರವಾಗಿ ಭಿನ್ನಾಭಿಪ್ರಾಯಗಳಿದ್ದವು. 'ನಕಲಿ ನಂದಿನಿ ತುಪ್ಪ' ಪ್ರಕರಣ ಬಯಲಾದ ಮೇಲೆ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕಾರಣಕ್ಕಾಗಿ ಅವರು ತಲೆಮರೆಸಿಕೊಂಡಿದ್ದರು.
ಇದನ್ನೂ ಓದಿ: ಆರೋಪಿಯನ್ನು ಕರೆ ತರುತ್ತಿದ್ದಾಗ ಅಪಘಾತ; ನಾಲ್ವರು ಪೊಲೀಸರು ಸೇರಿ ಐವರು ಸಾವು
ಭಾನುವಾರ ಶಿವಕುಮಾರ್ ತನ್ನ ಹೆಂಡತಿ ವನಿತಾ ಮನೆಗೆ ಹೋಗಿ ಆಸ್ತಿ ವಿಚಾರವಾಗಿ ಜಗಳವಾಡಿದ್ದಾರೆ. ಈ ಸಂದರ್ಭದಲ್ಲಿ ಅಮ್ಮನ ರಕ್ಷಣೆಗೆ ಬಂದ ಮಗ ಮೃಣಾಲ್, ತನ್ನ ತಂದೆಯ ಮೇಲೆ ಶೂಟ್ ಮಾಡಿದ್ದಾನೆ.
ಗುಂಡು ಶಿವಕುಮಾರ್ ಅವರ ಭುಜಕ್ಕೆ ತಾಕಿದ್ದು, ತಕ್ಷಣ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ. ಹಲ್ಲೆಗೊಳಗಾದ ಶಿವಕುಮಾರ್ ನೀಡಿದ ದೂರಿನ ಮೇರೆಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.