ಮೈಸೂರು: ಆತ್ಮ ನಿರ್ಭರ ಯೋಜನೆ ಬಗ್ಗೆ ಕೆಲವರು ರಾಜಕೀಯ ಪ್ರೇರಿತರಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಜನರಿಗೆ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಎಲ್ಲಾ ಕ್ಷೇತ್ರಗಳಿಗೆ ಆತ್ಮ ನಿರ್ಭರ ಯೋಜನೆಯಡಿಯಲ್ಲಿ ಹಣ ನೀಡಲಾಗಿದೆ. ಅಲ್ಲದೆ ಪಡಿತರ ವಸ್ತುಗಳ ಜೊತೆಗೆ ಅಗತ್ಯ ವಸ್ತುಗಳನ್ನು ಕೊಡಲಾಗಿದೆ. ಲಾಕ್ಡೌನ್ ಸಮಯದಲ್ಲಷ್ಟೇ ಅಲ್ಲ ಲಾಕ್ಡೌನ್ ಮುಗಿದ ನಂತರವೂ ಮೋದಿ ಸರ್ಕಾರ ಜನರ ಜೊತೆಗಿದೆ ಎಂದರು.
ಆತ್ಮ ನಿರ್ಭರ ಯೋಜನೆಯ ಬಗ್ಗೆ ಕೆಲವರು ರಾಜಕೀಯ ಪ್ರೇರಿತರಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ ದೇಶದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ರಾಜಕೀಯ ಬಿಟ್ಟು ಜನರ ಒಳಿತಿಗಾಗಿ ಸಲಹೆ ನೀಡಲಿ ಎಂದು ಹೇಳಿದರು.
ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡಗಳ ಸೌಲಭ್ಯ ನೀಡಲು ಅಧಿಕಾರಿಗಳು ಗೊಂದಲ ಉಂಟು ಮಾಡಿ, ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರಿಗೆ ಗೊಂದಲ ಪರಿಹರಿಸುವಂತೆ ಒತ್ತಾಯ ಮಾಡಲಾಗುವುದು ಎಂದು ತಿಳಿಸಿದರು.
ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವಕ್ಕೆ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಹೋಗಲು ಪತ್ರಕರ್ತರನ್ನು ಬಿಡದೆ ಇರುವುದಕ್ಕೆ ನಾನು ಹೊಣೆಗಾರನಲ್ಲ. ಜಿಲ್ಲಾಧಿಕಾರಿಯವರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದರು.