ಮೈಸೂರು: ಹುಣಸೂರು ವಿಧಾನಸಭಾ ಉಪಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಜೆಡಿಎಸ್ ಕ್ಯಾಂಡಿಡೇಟ್ ಸೋಮಶೇಖರ್ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.
ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಹೆಚ್ ಪಿ ಮಂಜುನಾಥ್ ಅವರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಅವರು ಸೋಮವಾರ ತಮ್ಮ ಮುಖಂಡರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದು, ಇಬ್ಬರಿಬ್ಬರ ನಡುವೆ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಅವರು ನಾಮಪತ್ರ ಸಲ್ಲಿಸಲಿದ್ದಾರೆ.
2018ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಸೋಮಶೇಖರ್ ಅವರಿಗೆ ಹೆಚ್.ವಿಶ್ವನಾಥ್ ಅವರ ಸ್ಪರ್ಧೆಯಿಂದ ನಿರಾಶೆಯಾಗಿತ್ತು. ಹಲವು ವರ್ಷಗಳ ಪ್ರಯತ್ನದ ಫಲವಾಗಿ ಇದೇ ಮೊದಲ ಬಾರಿಗೆ ಉಪಕದನದ ಮೂಲಕ ವಿಧಾನಸಭಾ ಚುನಾವಣೆ ಸ್ಪರ್ಧೆ ಮಾಡಿದ್ದು, ನಾಳೆ ನಾಮಪತ್ರ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ಹುಣಸೂರಿಗೆ ತೆರಳಿ ಜೆಡಿಎಸ್ ಅಭ್ಯರ್ಥಿ ಪರ ಮತಬೇಟೆಯ ಮೂಲಕ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ.
ಕುಮಾರಸ್ವಾಮಿ ಅವರು ನನ್ನ ಸರ್ಕಾರ ಬೀಳಲು ಕಾರಣರಾದ 15 ಜನರನ್ನು ಸೋಲಿಸಿತ್ತೀನಿ ಎಂದು ಪಣ ತೊಟ್ಟಿದ್ದು, ಶನಿವಾರದಿಂದ ಉಪಚುನಾವಣೆಯ ಮತಬೇಟೆ ಆರಂಭಗೊಳ್ಳುತ್ತಿದೆ. ಯಾವ ಅಸ್ತ್ರದ ಮೂಲಕ ಮತದಾರರನ್ನು ತಮ್ಮ ಪಕ್ಷದ ಕಡೆ ವಾಲುವಂತೆ ಮಾಡುತ್ತಾರೆ ಎಂಬುವುದನ್ನು ಕಾದು ನೋಡಬೇಕಿದೆ.