ಮೈಸೂರು : ಕಾಂಗ್ರೆಸ್ ಕೊಟ್ಟ ಗ್ಯಾರಂಟಿ ಭರವಸೆಗಳು ನಿನ್ನೆಯೇ ಉಲ್ಟಾ ಆಗಿವೆ. ಕಾಂಗ್ರೆಸ್ ಸರ್ಕಾರವನ್ನು ಡಿ.ಕೆ ಶಿವಕುಮಾರ್ ಒಂದು ಕಡೆ ಎಳೆದರೆ, ಸಿದ್ದರಾಮಯ್ಯ ಮತ್ತೊಂದು ಕಡೆ ಎಳೆಯುತ್ತಿದ್ದಾರೆ ಎಂದು ಮಾಜಿ ಸಚಿವ ವಿ ಸೋಮಣ್ಣ ಅವರು, ಕಾಂಗ್ರೆಸ್ ನಾಯಕರನ್ನು ವ್ಯಂಗ್ಯವಾಡಿದರು. ಇಂದು ನಗರದ ಬಿಜೆಪಿ ಕಚೇರಿಯಲ್ಲಿ ವರುಣ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಭೆಯನ್ನು ಸೋಮಣ್ಣ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ನಾನು ಅನಿರೀಕ್ಷಿತವಾಗಿ ವರುಣ ಕ್ಷೇತ್ರಕ್ಕೆ ಬಂದೆ. ನಮ್ಮ ನಾಯಕರು ಇಲ್ಲಿಗೆ ಕಳುಹಿಸಿದರು. ಬೆಂಗಳೂರಿನ ಗೋವಿಂದರಾಜ ನಗರದ ಶಾಸಕನಾಗಿ ಒಳ್ಳೆಯ ಕೆಲಸ ಮಾಡಿದ್ದೆ. ಆದರೆ, ನನ್ನನ್ನು ಹೈಕಮಾಂಡ್ ಇಲ್ಲಿಗೆ ಅಭ್ಯರ್ಥಿಯನ್ನಾಗಿ ಮಾಡಿದರು. ಚಾಮರಾಜನಗರ ಹಾಗೂ ವರುಣ ಕ್ಷೇತ್ರ ಎರಡು ಸೋತರೂ, ಇವೆರಡೂ ನನ್ನ ಕಣ್ಣುಗಳಿದ್ದಂತೆ. ಆದರೆ, ಕೆಲವು ಸಂದೇಶಗಳಿಂದ ನನಗೆ ಹಿನ್ನಡೆಯಾಯಿತು. ಆದರೂ ನಿಮ್ಮ ಜೊತೆ ನಾನು ಇರುತ್ತೇನೆ. ಕಾರ್ಯಕರ್ತರು ಯಾರೂ ಧೃತಿಗೆಡಬೇಡಿ. ಒಳ್ಳೆಯ ಕಾಲ ಬಂದೇ ಬರುತ್ತದೆ ಎಂದು ಕಾರ್ಯಕರ್ತರಿಗೆ ಸೋಮಣ್ಣ ಹುರಿದುಂಬಿಸಿದರು.
ಇದನ್ನೂ ಓದಿ : ಮುಂದಿನ 48 - 72 ಗಂಟೆಗಳಲ್ಲಿ ಸಚಿವ ಸಂಪುಟ ರಚನೆ: ಇನ್ನೂ ಯಾವುದೂ ಅಂತಿಮವಾಗಿಲ್ಲ... ಸುರ್ಜೇವಾಲಾ
ನನಗೆ ಪಕ್ಷವೇ ತಾಯಿ, ದೇವರು. ಯಾರು ನನ್ನ ಸೋಲಿಗೆ ಕಾರಣ ಎಂದು ಹೇಳುವುದಿಲ್ಲ. ಯಾರ ಬಳಿಯೂ ನಾನು ಭಿಕ್ಷೆ ಬೇಡುವುದಿಲ್ಲ. ಯಾವ ಎಂಎಲ್ಸಿ ಸ್ಥಾನಕ್ಕೂ ಆಸೆ ಪಟ್ಟವನಲ್ಲ. ಹಾಗೆ ಈ ಬಾರಿ ವಿಧಾನಸಭಾ ಚುನಾವಣೆ ಸೋಲಿನ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನೀವು ಸಹ ತಲೆ ಕೆಡಿಸಿಕೊಳ್ಳಬೇಡಿ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಹಾಗೂ ಚಾಮರಾಜನಗರ ಎರಡೂ ಕ್ಷೇತ್ರಗಳನ್ನು ಗೆಲ್ಲಲು ಶ್ರಮಿಸಿ ಎಂದು ಕಾರ್ಯಕರ್ತರಿಗೆ ಸೋಮಣ್ಣ ಇದೇ ವೇಳೆ ಧೈರ್ಯ ತುಂಬಿದರು.
ಇದನ್ನೂ ಓದಿ : ಚುನಾವಣಾ ಸೋಲಿನ ಪರಾಮರ್ಶೆ ಮಾಡಿದ್ದೇವೆ, ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ: ಬಸವರಾಜ ಬೊಮ್ಮಾಯಿ
ಡಬಲ್ ಸ್ಟೇರಿಂಗ್ ಸರ್ಕಾರ ಏನಾಗುತ್ತದೋ ನೋಡೋಣ : ವರುಣಾದಲ್ಲಿ ನನಗಾದ ಪರಿಸ್ಥಿತಿ ಬೇರೆಯವರಿಗೆ ಆಗುವುದು ಬೇಡ. ನಾನು ದೇವೇಗೌಡರ ಗರಡಿಯಲ್ಲಿ 30 ವರ್ಷ ಬೆಳೆದಿದ್ದೇನೆ. ನನ್ನ ಜೀವನ ತೆರೆದ ಪುಸ್ತಕ ಇದ್ದಂತೆ, ಹೈ ಕಮಾಂಡ್ ನನ್ನನ್ನು ಇಲ್ಲಿಗೆ ಯಾಕೆ ಕಳಿಸಿದರು ಎಂಬುದು ಗೊತ್ತಿಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಡಬಲ್ ಸ್ಟೇರಿಂಗ್ ಸರ್ಕಾರ 6 ತಿಂಗಳಲ್ಲಿ ಏನಾಗುತ್ತದೋ ಕಾದು ನೋಡೋಣ. ವರುಣಗೆ ಸಿದ್ದರಾಮಯ್ಯ ಸಿನಿಮಾ ತಾರೆಯರನ್ನ ಕರೆದುಕೊಂಡು ಬಂದಾಗ ನಿಮ್ಮ ಶಕ್ತಿ ಏನು ಎಂಬುದನ್ನು ನೆನಪಿಸಿಕೊಳ್ಳಿ ಎಂದು ಸಭೆಯಲ್ಲಿ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಸೋಮಣ್ಣ ತಿರುಗೇಟು ನೀಡಿದರು.
ಇದನ್ನೂ ಓದಿ : ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತ ಚರ್ಚೆ ಆರಂಭ: ಮುಂಚೂಣಿಯಲ್ಲಿ ಬೊಮ್ಮಾಯಿ ಹೆಸರು