ಮೈಸೂರು: ಧರ್ಮ ಬೋಧನೆಯಿಂದ ಜನರ ಬದುಕು ಬದಲಾಗುವುದಿಲ್ಲ. ಮನುಷ್ಯನಿಗೆ ಧರ್ಮ ಇರಬೇಕು, ಧರ್ಮಕ್ಕೋಸ್ಕರ ಮನುಷ್ಯನಿಲ್ಲ. ನಾವು ಎಲ್ಲರೂ ಮನುಷ್ಯರಾಗಿ ಬದುಕಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ನಂಜನಗೂಡು ತಾಲೂಕಿನ ಸುತ್ತೂರು ಜಾತ್ರಾ ಮಹೋತ್ಸವದ ಮೂರನೇ ದಿನವಾದ ಶುಕ್ರವಾರ ಗಾಳಿಪಟ ಸ್ಪರ್ಧೆ, ಚಿತ್ರಕಲಾ, ದೇಸಿ ಆಟಗಳ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಗತಿಪರ ಚಿಂತಕ ಪ. ಮಲ್ಲೇಶ್ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಅವರ ಅಗಲಿಕೆ ನನಗೆ ವೈಯಕ್ತಿಕವಾಗಿ ತುಂಬಲಾರದ ನಷ್ಟವಾಗಿದೆ ಎಂದು ಸ್ಮರಿಸಿದರು.
ನಾನು ಚಿಕ್ಕವನಾಗಿದ್ದಾಗ ದೇಸಿ ಆಟಗಳನ್ನು ಆಡುತ್ತಿದ್ದೆವು. ಆದರೆ ಈಗ ಕಡಿಮೆಯಾಗಿದೆ. ಮನುಷ್ಯನ ಬದುಕಿಗೆ ಕ್ರೀಡೆ ಬಹಳ ಮುಖ್ಯ. ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕ್ರೀಡೆಗಳು ನಡೆಯುತ್ತಿದೆ. ನಮ್ಮ ದೇಶದಲ್ಲಿ ಹುಟ್ಟಿರುವ ಕ್ರೀಡೆಗಳನ್ನು ನಾವು ಮುಂದುವರಿಸಬೇಕು. ಗ್ರಾಮೀಣ ಜನರಲ್ಲಿ ಸುತ್ತೂರು ಶ್ರೀಗಳು ಜಾಗೃತಿಯನ್ನು ಮೂಡಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ: ಮೈಸೂರು: ಸಮಾಜವಾದಿ ಗೆಳೆಯನ ಅಂತಿಮ ದರ್ಶನ ಪಡೆದ ಸಿದ್ದರಾಮಯ್ಯ..
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ: ಈ ಹಿಂದೆ ಹೆಣ್ಣು ಮಕ್ಕಳ ಮೇಲೆ, ದಲಿತರ ಮೇಲೆ ಶೋಷಣೆ ನಡೆಯುತ್ತಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಿಂದ ಎಲ್ಲರೂ ಈಗ ಸಮಾನರಾಗಿದ್ದಾರೆ. ಎಲ್ಲರಿಗೂ ಸಮಾನ ಹಕ್ಕುಗಳು ಸಿಕ್ಕಿವೆ. ಆರ್ಥಿಕ ಅಸಮಾನತೆ ತೊಲಗಿಸಬೇಕು. ಶೋಷಣೆ, ಅನ್ಯಾಯ ಇದೇ ರೀತಿ ಮುಂದುವರೆದರೆ ಪ್ರಜಾಪ್ರಭುತ್ವವನ್ನು ಪ್ರಜೆಗಳೇ ಧ್ವಂಸ ಮಾಡುತ್ತಾರೆ. ಆರ್ಥಿಕ ಸ್ವಾವಲಂಬನೆ, ಸಂಪತ್ತನ್ನು ಎಲ್ಲರಿಗೂ ಹಂಚಿದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಭಾಷಣ ಹೊಡೆದರೆ ಸಾಲದು ಎಂದು ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಸಿದ್ದರಾಮಯ್ಯ ಗುಡುಗಿದರು.
ಇದನ್ನೂ ಓದಿ: ಬಿಜೆಪಿಯವರ ಪಾಪದ ಪುರಾಣ ಜನರ ಮುಂದೆ ತರುವುದೇ ನಮ್ಮ ಉದ್ದೇಶ: ಸಿದ್ದರಾಮಯ್ಯ
ರೈತರು, ಶಿಕ್ಷಕರು, ಸೈನಿಕರನ್ನು ನಾವು ಯಾವಾಗಲೂ ಸ್ಮರಿಸಬೇಕು. ಯಾಕೆಂದರೆ, ಇವರಲ್ಲಿ ಯಾವುದೇ ಸ್ವಾರ್ಥವಿಲ್ಲ. ನಾನು ಎನ್ನುವ ಬದಲು ನಾವು ಎಂದು ಬದುಕಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸುತ್ತೂರು ಶ್ರೀಗಳು ಶಿಕ್ಷಣವನ್ನು ನೀಡಿ ಅವರ ಬಾಳಲ್ಲಿ ಬೆಳಕಾಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಪಾಪ ಮಾಡಿದ ಪಕ್ಷವನ್ನು ಸುಮ್ಮನೆ ಮನೆಗೆ ಹೋಗಲು ಬಿಡುವುದಿಲ್ಲ: ಸಿದ್ದರಾಮಯ್ಯ-ಡಿಕೆಶಿ ವಾಗ್ದಾನ
ಈ ವೇಳೆ ಸುತ್ತೂರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿಗಳು, ವಾಟಾಳು ಶ್ರೀಗಳು, ಮಾಜಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ, ಶಾಸಕರಾದ ಕುಮಾರ್ ಬಂಗಾರಪ್ಪ, ಪುಟ್ಟರಂಗಶೆಟ್ಟಿ, ಯು.ಟಿ. ಖಾದರ್, ಮಾಜಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಕಳಲೆ ಕೇಶವಮೂರ್ತಿ, ವೆಂಕಟೇಶ್, ಮಾಜಿ ಸಚಿವ ಪಿಜಿಆರ್ ಸಿಂಧ್ಯ ಭಾಗವಹಿಸಿದ್ದರು.
ಇದನ್ನೂ ಓದಿ: ಬೊಮ್ಮಾಯಿ ರಾಜ್ಯ ಕಂಡ ಅತ್ಯಂತ ವೀಕೆಸ್ಟ್ ಮುಖ್ಯಮಂತ್ರಿ: ಸಿದ್ದರಾಮಯ್ಯ