ಮೈಸೂರು: ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನಾಮಪತ್ರ ಸಲ್ಲಿಸಿದರು. ನಂಜನಗೂಡಿನ ತಾಲೂಕು ಪಂಚಾಯತಿ ಕಚೇರಿಗೆ ಆಗಮಿಸಿದ ಅವರು ಚುನಾವಣಾಧಿಕಾರಿಗೆ ಉಮೇದುವಾರಿಕೆ ಸಲ್ಲಿಸಿದರು. ತಮ್ಮ ರಾಜಕೀಯ ಜೀವನದಲ್ಲಿ ಕೊನೆಯ ಚುನಾವಣೆ ಎದುರಿಸುತ್ತಿರುವ ಸಿದ್ದರಾಮಯ್ಯ, ಈ ಬಾರಿ ತಮ್ಮ ಹುಟ್ಟೂರು ವ್ಯಾಪ್ತಿಯ ವರುಣ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಬೆಳಗ್ಗೆ ಸಿದ್ದರಾಮನಹುಂಡಿಯಲ್ಲಿ ಸಿದ್ದರಾಮೇಶ್ವರ ಹಾಗೂ ನಾಡ ಅಧಿದೇವತೆ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿ ನಂಜನಗೂಡಿಗೆ ನಾಮಪತ್ರ ಸಲ್ಲಿಸಲು ಅವರು ಆಗಮಿಸಿದರು.
ನಂಜನಗೂಡಿಗೆ ತೆರಳುವ ಮಾರ್ಗದ ಗೂಳೂರು ಸರ್ಕಲ್‌ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಈ ಬಾರಿ ನನ್ನ ಹುಟ್ಟೂರು ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ತಾವು ನೀವೇ ಅಭ್ಯರ್ಥಿ ಎಂದು ಭಾವಿಸಿ, ಮತ ಹಾಕಿ ಗೆಲ್ಲಿಸಿಕೊಡಬೇಕು. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗಬೇಡಿ ಎಂದು ಜನರಲ್ಲಿ ಮನವಿ ಮಾಡಿದರು.
ಮೈಸೂರು ಜಿಲ್ಲೆಯ ಹಲವೆಡೆ ನಾಮಪತ್ರ ಸಲ್ಲಿಕೆ : ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ. ಅಮವಾಸ್ಯೆ ಹಾಗೂ ಗ್ರಹಣದ ಹಿನ್ನೆಲೆಯಲ್ಲಿ ಬಹುತೇಕ ಅಭ್ಯರ್ಥಿಗಳು ಇಂದೇ ನಾಮಪತ್ರ ಸಲ್ಲಿಸಿದರು. ಮೈಸೂರು ನಗರದ ಕೆ.ಆರ್.ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ, ಮೈಸೂರು ನಗರ ವ್ಯಾಪ್ತಿಯ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹರೀಶ್ ಗೌಡ, ಇದೇ ಚಾಮರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್ ಕೆ.ರಮೇಶ್ ನಾಮಪತ್ರ ಸಲ್ಲಿಸಿದರು.