ಮೈಸೂರು: ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರ ಸರ್ಕಾರ ರಾಜಕೀಯವಾಗಿ ಕಿರುಕುಳ ನೀಡುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಇಡಿ ಸಮನ್ಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನ್ಯಾಷನಲ್ ಹೆರಾಲ್ಡ್ ವಿಚಾರದಲ್ಲಿ ಮನಿಲಾಂಡ್ರಿಂಗ್ ಆಗಿಲ್ಲ. ಕಪ್ಪು ಹಣವನ್ನು ಬೇರೆ ಕಡೆ ಹಾಕಿದ್ರೆ ಅದು ಮನಿಲಾಂಡ್ರಿಂಗ್. ಕಾಂಗ್ರೆಸ್ ಪಕ್ಷ 90 ಕೋಟಿ ಸಾಲ ಕೊಟ್ಟಿದೆ. ಹೀಗಾಗಿ ಇದು ರಾಜಕೀಯ ಪ್ರೇರಿತವಾದ ಸಮನ್ಸ್ ಎಂದು ವಾಗ್ದಾಳಿ ನಡೆಸಿದರು.
ಸುಳ್ಳು ಕೇಸ್‌ಗಳನ್ನು ಹಾಕುತ್ತಿದ್ದಾರೆ. ರಾಹುಲ್ ಗಾಂಧಿಗೆ ಐದು ದಿನಗಳ ಕಾಲ ಕಿರುಕುಳ ನೀಡಿದ್ರು. ಇಡಿ, ಸಿಬಿಐ ಸೇರಿ ಎಲ್ಲಾ ಸ್ವಾಯತ್ತ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಚುನಾವಣೆ ಹತ್ತಿರ ಬಂತು ಅಂತ ಏನಿಲ್ಲ, ಮೋದಿ ಬಂದಾಗಿನಿಂದಲೂ ಹೀಗೆಯೇ ದುರ್ಬಳಕೆ ಆಗ್ತಿದೆ ಎಂದರು.
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ: ಮಳೆ ಹಾನಿ ಹಾಗೂ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ಕೊಡುತ್ತೇನೆ. ರಾಷ್ಟ್ರಪತಿ ಚುನಾವಣೆ ನಂತರ ಪ್ರವಾಸ ಮಾಡುತ್ತೇನೆ. ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಪ್ರವಾಹವಾಗಿತ್ತು. ಆಗಿನ ಪರಿಹಾರವನ್ನೇ ಇನ್ನೂ ಕೊಟ್ಟಿಲ್ಲ. ಪರಿಹಾರವನ್ನು ವಾರದೊಳಗೆ ಕೊಡುವಂತಾಗಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ನಾಳೆ ರಾಷ್ಟ್ರಪತಿ ಚುನಾವಣೆ.. ಮತದಾನದ ತರಬೇತಿ ಪಡೆದ ಬಿಜೆಪಿ ನಾಯಕರು
ಪ್ರವಾಹದ ಸ್ಥಳಗಳಿಗೆ ಸಚಿವರು ಹೋಗುತ್ತಿಲ್ಲ ಎಂಬ ವಿಚಾರವಾಗಿ ಮಾತನಾಡಿ, ಲೂಟಿ ಮಾಡೋಕೆ ಅವರಿಗೆ ಸಮಯ ಇದೆ. ಇದಕ್ಕೆಲ್ಲ ಎಲ್ಲಿ ಹೋಗುತ್ತಾರೆ. ಆಪರೇಷನ್ ಕಮಲದಿಂದ ಲೂಟಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.