ಮೈಸೂರು: ನಾಳೆಯಿಂದ ಮಹಿಳೆಯರ ಉಚಿತ ಬಸ್ ಪ್ರಯಾಣ 'ಶಕ್ತಿ ಯೋಜನೆ'ಗೆ ಚಾಲನೆ ಸಿಗಲಿದೆ. ರಾಜ್ಯದ ಎಲ್ಲ ಮಹಿಳೆಯರು ಸ್ಲಿಪರ್ ಕೋಚ್, ಎಸಿ ಹಾಗೂ ಐಷಾರಾಮಿ ಬಸ್ ಬಿಟ್ಟು ಎಲ್ಲ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು. ಅದು ರಾಜ್ಯದ ಒಳಗೆ ಮಾತ್ರ! ಬೇರೆ ರಾಜ್ಯಗಳಿಗೆ ಹೋದ್ರೆ ಇಲ್ಲ. ಹೊರ ರಾಜ್ಯಕ್ಕೆ ಹೋಗುವವರು ರಾಜ್ಯದ ಗಡಿವರೆಗೆ ಹೋಗಿ ನಂತರ ಟಿಕೆಟ್ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನ ಸುತ್ತೂರು ಹೆಲಿಪ್ಯಾಡ್‌ನಲ್ಲಿ ಮಾತನಾಡಿದ ಅವರು, ನಾಳೆ ಮಧ್ಯಾಹ್ನ 1 ಗಂಟೆಯಿಂದ ಈ ಯೋಜನೆಗೆ ಚಾಲನೆ ಸಿಗಲಿದೆ. ವಿಧಾನಸೌದದ ಬಳಿ ನಾನು, ಡಿಸಿಎಂ ಶಿವಕುಮಾರ್ ಹಾಗೂ ಸಾರಿಗೆ ಸಚಿವರು 'ಶಕ್ತಿ ಯೋಜನೆ'ಗೆ ಚಾಲನೆ ನೀಡಲಿದ್ದೇವೆ. ಇದು ಎಲ್ಲ ಜಿಲ್ಲಾ ಕೇಂದ್ರದಲ್ಲಿ ಏಕಕಾಲದಲ್ಲಿ ಜಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದರು.
ವರುಣ ತಾಲೂಕು ಕೇಂದ್ರ ಬೇಡಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜನರು ವರುಣ ತಾಲೂಕು ಮಾಡಿ ಅಂತ ಕೇಳಿಲ್ಲ. ಬಸವರಾಜ ಬೊಮ್ಮಾಯಿ ಸೇರಿದಂತೆ ಕೆಲ ಬಿಜೆಪಿ ನಾಯಕರು ಹೇಳಿದ್ದಾರೆ. ಜನ ಎಲ್ಲೂ ಕೇಳಿಲ್ಲ. ಬಸವರಾಜ ಬೊಮ್ಮಾಯಿ ಹೇಳಿದ್ರೆ ಮಾಡಲ್ಲ. ಜನ ಕೇಳಿದ್ರೆ ಬೇಕಾದ್ರೆ ಮಾಡುತ್ತೇನೆ ಎಂದು ಭರವಸೆ ನೀಡಿದರು. ಇನ್ನು ರಾಜ್ಯದ ಜಿಎಸ್‌ಟಿ ಕುರಿತು ಮಾತನಾಡಿದ ಸಿಎಂ, ನ್ಯಾಯಯುತವಾಗಿ ಕೇಂದ್ರದಿಂದ ನಮಗೆ ಬೇಕಾದ ಹಣವನ್ನು ಒತ್ತಾಯ ಪೂರ್ವಕವಾಗಿ ಕೇಳುತ್ತೇವೆ. ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದರು.
ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರ ಶೇ. 40ರಷ್ಟು ಆರೋಪ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಹಗರಣಗಳಾದ 40% ಕಮಿಷನ್ ಸೇರಿದಂತೆ ಇನ್ನಿತರ ಹಗರಗಳ ಸಂಬಂಧಿಸಿದಂತೆ ಯಾರೋ ಏನೋ ಹೇಳಿದರು ಅಂತ ನಾವು ತನಿಖೆ ನಡೆಸುವುದಿಲ್ಲ. ಅದನ್ನು ಕೋಟ ಶ್ರೀನಿವಾಸ ಪೂಜಾರಿ, ಬಸವರಾಜ ಬೊಮ್ಮಾಯಿಯವರನ್ನ ಕೇಳಿ ತನಿಖೆ ಮಾಡಿಸಬೇಕು ಅಂತ ಏನು ಇಲ್ಲ. ಪಿಎಸ್‌ಐ ತನಿಖೆ ಈಗಾಗಲೇ ನಡೆಯುತ್ತಿದೆ. ಎಡಿಜಿಪಿ ಅಮೃತ್ ಪೌಲ್ ಜೈಲಿನಲ್ಲಿದ್ದಾರೆ. ಎಲ್ಲದರ ಬಗ್ಗೆಯೂ ಮಾಹಿತಿ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯದಲ್ಲಿ ಮಳೆ ಕೊರತೆ ವಿಚಾರ ಆತಂಕ ತರಿಸಿರುವುದು ನಿಜ. ಈ ಬಗ್ಗೆ ಸೋಮವಾರ ಕುಡಿಯುವ ನೀರಿನ ಸಂಬಂಧ ಅಧಿಕಾರಿಗಳ ಸಭೆ ಕರೆದಿದ್ದೇನೆ. ಮಳೆ ಸಮಸ್ಯೆ ಇರುವ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡುವೆ ಎಂದು ಇದೇ ವೇಳೆ ಹೇಳಿದರು.
ಜುಲೈ 1 ರಿಂದ ಕಲಬುರಗಿಯಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ಸಿಗಲಿದೆ. ಅಂದೇ 10 ಕೆಜಿ ಆಹಾರ ಧಾನ್ಯ ಕೊಡುವ ಯೋಜನೆಗೂ ಮೈಸೂರಿನಲ್ಲಿ ಚಾಲನೆ ದೊರೆಯಲಿದೆ. ಜುಲೈ 16 ರಿಂದ ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿ ಆಗುತ್ತೆ. 2022-23ರಲ್ಲಿ ಪಾಸ್ ಆದ ಪದವಿ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳು 24 ತಿಂಗಳಲ್ಲಿ ಕೆಲಸ ಸಿಗದಿದ್ದರೆ ಯುವ ನಿಧಿ ಗ್ಯಾರಂಟಿಯಲ್ಲಿ ಹಣ ಸಿಗಲಿದೆ. ಆದರೆ, ಮಧ್ಯೆ ಸರ್ಕಾರಿ ಅಥವಾ ಖಾಸಗಿ ಕೆಲಸ ಸಿಕ್ಕರೆ ಅವರಿಗೆ ಹಣ ಸಿಗುವುದಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಎಲ್ಲಿಂದ ಬರುತ್ತದೆ ಅನ್ನೋದರ ಬಗ್ಗೆ ಯಾರು ತಲೆಬಿಸಿ ಮಾಡಿಕೊಳ್ಳಬೇಕಿಲ್ಲ. ನಾವು ಹೇಳಿದಂತೆ ಯೋಜನೆ ಜಾರಿ ಮಾಡುತ್ತೇವೆ. ಸರ್ಕಾರದ ತಲೆನೋವು ನಿಮಗ್ಯಾಕೆ ಎಂದು ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದರು.
ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿದ್ಯುತ್ ದರವನ್ನ ಪ್ರತಿ ವರ್ಷ ರೆಗ್ಯುಲೇಟರಿ ಕಮಿಷನ್ ದರ ಪರಿಷ್ಕರಣೆ ಮಾಡುತ್ತೆ. ಜೂನ್ 1 ರಿಂದ ಜಾರಿ ಮಾಡುತ್ತಾರೆ. ನಾವು ಅಧಿಕಾರಕ್ಕೆ ಬರುವ ಮುಂಚಿತವಾಗಿ ವಿದ್ಯುತ್ ದರ ಪರಿಷ್ಕರಣೆ ಆಗಿದೆ. ಚುನಾವಣೆ ನೀತಿ ಸಂಹಿತೆಯಿಂದ ತಡೆ ಆಗಿತ್ತು. ಜೂನ್ ತಿಂಗಳಿಂದ ಅದು ಜಾರಿ ಆಗಿದೆ. ಪ್ರತಿಪಕ್ಷಗಳ ಜೊತೆಗೆ ಮಾಧ್ಯಮಗಳೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಉಚಿತ ವಿದ್ಯುತ್ ಬೇಡ ಅಂದವರಿಗೆ ಬಲವಂತ ಮಾಡುತ್ತಿಲ್ಲ. ಸರಾಸರಿ ಬಳಕೆ ಆಧಾರದಲ್ಲಿ ಶೇಕಡ 10 ವಿದ್ಯುತ್ ನೀಡುತ್ತೇವೆ. ಸುಮ್ಮನೆ ದುಂದು ವೆಚ್ಚ ಮಾಡಲು ಪೂರ್ತಿ 200 ಯುನಿಟ್ ಕೊಡೋಕಾಗುತ್ತಾ? ಟಿವಿಗಳಲ್ಲಿ ದಿನವಿಡಿ 200 ಯುನಿಟ್ ಬಗ್ಗೆ ಇದೇ ಚರ್ಚೆ ಮಾಡಲಾಗುತ್ತದೆ. ನಾವು ಏನು ಹೇಳಿದ್ದೇವೆಯೋ ಅದನ್ನೇ ಮಾಡುತ್ತೇವೆ. ಬಿಜೆಪಿಯವರಂತೆ ಸುಳ್ಳು ಹೇಳುವುದಿಲ್ಲ. ನಾನು ಅಧಿಕಾರ ಇರಲಿ, ಇಲ್ಲದಿರಲಿ ಒಂದೇ ರೀತಿ ಇರುತ್ತೇನೆ ಎಂದರು.
ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಸ್ವ-ಕ್ಷೇತ್ರಕ್ಕೆ ಆಗಮಿಸುತ್ತಿರುವುದರಿಂದ ಸಿದ್ದರಾಮಯ್ಯಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಸುತ್ತೂರು ಹೆಲಿಪ್ಯಾಡ್ನಿಂದ ವೇದಿಕೆವರೆಗೆ ಅವರನ್ನು ಮೆರವಣಿಗೆ ಮಾಡಲಾಯಿತು. ಮೆರವಣಿಗಯಲ್ಲಿ ಪೂಜಾಕುಣಿತ, ಡೊಳ್ಳು ಕುಣಿತ, ಜಾನಪದ ಕಲಾತಂಡಗಳು ಭಾಗಿಯಾಗಿದ್ದವು. ಬಿಳಿಗೆರೆ ಬಳಿ ಕಾರ್ಯಕ್ರಮ ನಡೆಯಲಿದ್ದು ಬಳಿಕ, ವರುಣಾ ಕ್ಷೇತ್ರದ ಕೃತಜ್ಞತಾ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: Monsoon 2023: ತಡವಾದ ಮುಂಗಾರು.. ಹುಟ್ಟುವ ಮುನ್ನವೇ ಕಮರಲಾರಂಭಿದ ಸಸಿ