ಮೈಸೂರು: ಜಿಲ್ಲೆಯಲ್ಲಿ ಮಳೆಯಿಂದ ಉಂಟಾದ ಹಾನಿಗೆ ಪ್ರತ್ಯಕ್ಷವಾಗಿ ಆಯಾ ಕ್ಷೇತ್ರದ ಶಾಸಕರ ಸಭೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಳೆ ಮತ್ತು ಪ್ರವಾಹದಿಂದ ಉಂಟಾಗಿರುವ ಹಾನಿ, ಕೈಗೊಂಡಿರುವ ಕ್ರಮಗಳು ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಯ್ಲಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಕಳೆದ ವರ್ಷ ಮತ್ತು ಈ ವರ್ಷ ಮಳೆ ಹಾಗೂ ಪ್ರವಾಹದಿಂದ ಉಂಟಾದ ಹಾನಿಯ ಬಗ್ಗೆ ಮುಂದಿನ ವಾರ ಕ್ಷೇತ್ರಗಳಿಗೆ ತೆರಳಿ ಆಯಾ ಕ್ಷೇತ್ರಗಳಲ್ಲೇ ಸಭೆ ನಡೆಸಿ ಶಾಶ್ವತ ಪರಿಹಾರದ ಬಗ್ಗೆ ಕ್ರಮ ಕೈಗೊಳ್ಳಲು ಯೋಚಿಸಲಾಗಿದೆ ಎಂದರು.
ಮಳೆ ಮತ್ತು ಪ್ರವಾಹದ ಹಾನಿಯ ಬಗ್ಗೆ ಲೆಕ್ಕಾಚಾರ ಆಗಿಲ್ಲ. ಅದರ ಸಂಪೂರ್ಣ ವರದಿಯ ನಂತರ ಪರಿಹಾರದ ಬಗ್ಗೆ ತಿಳಿಸಲಾಗುವುದು ಎಂದ ಅವರು, ಪ್ರವಾಹ ಪ್ರದೇಶಗಳ ಸಂತ್ರಸ್ತ ರೈತರನ್ನು ಶಾಶ್ವತ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಬಗ್ಗೆ ಜಿಲ್ಲಾಡಳಿತ ಸಿದ್ಧವಿದೆ. ಆ ಕ್ಷೇತ್ರಗಳಿಗೆ ಜನರು ಬರಲು ಒಪ್ಪುತ್ತಿಲ್ಲ. ಈ ಬಗ್ಗೆ ಸ್ಥಳೀಯ ಶಾಸಕರ ಜೊತೆ ಮಾತನಾಡಿ ಬಗೆಹರಿಸುವುದಾಗಿ ತಿಳಿಸಿದರು.
ಹಾಗೆಯೇ ಹೆಚ್.ಡಿ.ಕೋಟೆ, ಹುಣಸೂರು, ನಂಜನಗೂಡು ಪ್ರದೇಶಗಳಲ್ಲಿ ಮಳೆ ಹಾಗೂ ಪ್ರವಾಹದ ಹಾನಿಗಳ ಬಗ್ಗೆ ಸ್ಥಳೀಯ ಶಾಸಕರು ಸಚಿವರಿಗೆ ವಿವರಿಸಿದರು.
ನಾಳೆ ಮೈಸೂರು ಕೋವಿಡ್ ಸಂಬಂಧ ಸಭೆ: ಬೆಂಗಳೂರಿನಲ್ಲಿ ಈಗಾಗಲೇ ಕೋವಿಡ್-19 ನಿಯಂತ್ರಣ ಸಂಬಂಧ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಖಾಸಗಿ ಆಸ್ಪತ್ರೆಗಳ ಸಹಕಾರವನ್ನೂ ಪಡೆದು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿರುವುದರಿಂದ ಸಾವಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೀಗಾಗಿ ಶನಿವಾರ ಮೈಸೂರು ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಸಂಬಂಧ ಸಭೆ ಕರೆಯಲಾಗಿದ್ದು, ಅಲ್ಲಿ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
ಆಸ್ತಿ-ಪಾಸ್ತಿ ಹಾನಿ ಮಾಡಿದವರ ಆಸ್ತಿ ಮುಟ್ಟುಗೋಲಿಗೆ ಸರ್ಕಾರ ಚಿಂತನೆ: ಬೆಂಗಳೂರು ಗಲಭೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಯಾರು ಆಸ್ತಿ-ಪಾಸ್ತಿ ಹಾನಿ ಮಾಡಿದ್ದಾರೆಯೋ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಈಗಾಗಲೇ ಚಿಂತನೆ ನಡೆದಿದೆ. ಸರ್ಕಾರ ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ನಿಟ್ಟಿನಲ್ಲಿ ಕ್ರಮ ವಹಿಸಲಿದೆ ಎಂದರು.
ಕೋವಿಡ್- ಪ್ರವಾಹ ಹಿನ್ನೆಲೆ ದಸರಾ ಸಿದ್ಧತೆ ಬಗ್ಗೆ ಚಿಂತನೆ ನಡೆಸಿಲ್ಲ: ಸದ್ಯ ಕೋವಿಡ್ ಹಾಗೂ ಪ್ರವಾಹದ ಸಂದರ್ಭದಲ್ಲಿ ರಕ್ಷಣೆ ಕಾರ್ಯ ಭರದಿಂದ ಸಾಗಿದೆ. ಸಾವು-ನೋವಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ಇವುಗಳ ಬಗ್ಗೆಯೇ ಹೆಚ್ಚು ಒತ್ತನ್ನು ನೀಡಲಾಗುತ್ತಿದೆ. ಹಾಗಾಗಿ ಇನ್ನೂ ದಸರಾ ಸಿದ್ಧತೆ ಬಗ್ಗೆ ಚಿಂತನೆ ನಡೆಸಿಲ್ಲ. ಮುಂದಿನ ವಾರ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಬೆಳೆ ಹಾನಿ ಸಮೀಕ್ಷೆ ಮೊಬೈಲ್ ಆ್ಯಪ್ ಬಿಡುಗಡೆ: ಮಳೆ, ಪ್ರವಾಹ ಹಾಗೂ ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಉಂಟಾಗುವ ಬೆಳೆಹಾನಿ ಬಗ್ಗೆ ರೈತರೇ ಸ್ವತಃ ಸಮೀಕ್ಷೆ ವರದಿ ಸಲ್ಲಿಸುವ ಆ್ಯಪ್ ಮಾಹಿತಿಯುಳ್ಳ ಕೈಪಿಡಿಯನ್ನು ಸಚಿವ ಎಸ್.ಟಿ.ಸೋಮಶೇಖರ್ ಬಿಡುಗಡೆಗೊಳಿಸಿದರು.