ಮೈಸೂರು: ಮೈಸೂರಿನ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಹಿಳೆಯೊಬ್ಬರು ಅಧಿಕಾರ ಸ್ವೀಕರಿಸಿದ್ದು, ಸೀಮಾ ಲತ್ಕರ್ ಎಸ್ಪಿ ಪಟ್ಟ ಅಲಂಕರಿಸಿದ್ದಾರೆ.
ಮೈಸೂರು ಜಿಲ್ಲೆಗೆ ಎಸ್ಪಿ ಹುದ್ದೆ ಸೃಷ್ಟಿಯಾದಾಗಿನಿಂದ, ಪುರುಷರೇ ಎಸ್ಪಿ ಹುದ್ದೆ ಅಲಂಕರಿಸುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಎಸ್ಪಿ ಖುರ್ಚಿಯಲ್ಲಿ ಕುಳಿತಿದ್ದಾರೆ. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಎಸ್ಪಿ) ಸ್ನೇಹ ಕಾರ್ಯನಿರ್ವಹಿಸಿ ತೆರಳಿದ್ದರು. ಈಗ ಎಎಸ್ಪಿ ಹುದ್ದೆಯಲ್ಲಿಯೂ ಮಹಿಳೆ (ಎಎಸ್ಪಿ ನಂದಿನಿ) ಇದ್ದಾರೆ.
ಎಸ್ಪಿ ಹಾಗೂ ಎಎಸ್ಪಿ ಹುದ್ದೆಯಲ್ಲಿ ಮಹಿಳೆಯರ ದರ್ಬಾರ್ ಬುಧವಾರದಿಂದ ಶುರುವಾಗಿದೆ. ನಿರ್ಗಮಿತ ಎಸ್ಪಿ ಆರ್ ಚೇತನ್ ಅವರು, ನೂತನ ಎಸ್ ಪಿ ಸೀಮಾ ಲತ್ಕರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಮೈಸೂರು ಎಸ್ಪಿ, ಡಿಸಿಪಿ ವರ್ಗಾವಣೆ: ಮೈಸೂರು ಎಸ್ಪಿ ಆರ್ ಚೇತನ್ ಹಾಗೂ ಕಾನೂನು ವಿಭಾಗದ ಡಿಸಿಪಿ ಪ್ರದೀಪ್ ಗುಂಟೆ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು, ನೂತನ ಎಸ್ಪಿಯಾಗಿ ಸೀಮಾ ಲತ್ಕರ್, ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಎಂ.ಮುತ್ತರಾಜು ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಮೈಸೂರಿನ ಎಸ್ಪಿ ಆಗಿದ್ದ ಆರ್ ಚೇತನ್ ಅವರನ್ನು ಬೆಂಗಳೂರು ಗುಪ್ತಚರ ಇಲಾಖೆ ಎಸ್ಪಿಯಾಗಿ ವರ್ಗಾಯಿಸಿದ್ದು, ಮೈಸೂರು ಡಿಸಿಪಿಯಾಗಿದ್ದ ಪ್ರದೀಪ್ ಗುಂಟಿ ಅವರಿಗೆ ಸ್ಥಳ ನಿಯೋಜನೆ ಆಗಿಲ್ಲ.
ಇದನ್ನೂ ಓದಿ: ಮೈಸೂರು ಜಿಲ್ಲಾಧಿಕಾರಿಯಾಗಿ ಡಾ.ಕೆ.ವಿ.ರಾಜೇಂದ್ರ ಅಧಿಕಾರ ಸ್ವೀಕಾರ