ಮೈಸೂರು: ನವೆಂಬರ್ ತಿಂಗಳಿನಲ್ಲಾದರೂ ಸುಟ್ಟುಹೋದ ಗ್ರಂಥಾಲಯವನ್ನು ಪುನರ್ ನಿರ್ಮಾಣ ಮಾಡಿಕೊಡಿ ಎಂದು ಪುಸ್ತಕ ಪ್ರೇಮಿ ಸಯ್ಯದ್ ಇಸಾಕ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಮೈಸೂರಿನ ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯಲ್ಲಿರುವ ರಾಜೇಂದ್ರ ನಗರದಲ್ಲಿ ಹಲವು ವರ್ಷಗಳಿಂದ ಕನ್ನಡ ಪ್ರೇಮಿ ಸಯ್ಯದ್ ಇಸಾಕ್ ಗ್ರಂಥಾಲಯ ನಡೆಸಿಕೊಂಡು ಬಂದಿದ್ದರು. ಆದರೆ, ಈ ಗ್ರಂಥಾಲಯಕ್ಕೆ ಏಪ್ರಿಲ್ 9 ರ ಮುಂಜಾನೆ ಬೆಂಕಿ ಬಿದ್ದಿತ್ತು. ಪರಿಣಾಮ ಅಲ್ಲಿದ್ದ ಸಾವಿರಾರು ಪುಸ್ತಕಗಳು ಸುಟ್ಟು ಕರಕಲಾಗಿದ್ದವು.

ಹೀಗಾಗಿ, ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದ ಸೈಯದ್ ಇಸಾಕ್ ಕಂಗಾಲಾಗಿದ್ದರು. ಈ ಕನ್ನಡ ಪ್ರೇಮಿ ಬಗ್ಗೆ ತಿಳಿದಿದ್ದ ದಾನಿಗಳು ಸಹಾಯಕ್ಕೆ ಧಾವಿಸಿದ್ದರು. ಆದರೆ, ಸರ್ಕಾರ ಕಟ್ಟಡ ನಿರ್ಮಿಸಿಕೊಡುವ ಆಶ್ವಾಸನೆ ನೀಡಿದ್ದರಿಂದಲೇ ಯಾರ ಬಳಿಯೂ ಅವರು ಸಹಾಯ ಕೇಳಿರಲಿಲ್ಲ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕನ್ನಡ ಗ್ರಂಥಾಲಯಕ್ಕೆಂದು ನಿವೇಶನ ಮಂಜೂರು ಮಾಡಿದೆ. ಆದರೆ, ಕಟ್ಟಡ ನಿರ್ಮಾಣದ ಜವಾಬ್ದಾರಿ ಹೊಂದಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆ ಅನುದಾನದ ಕೊರತೆ ನೆಪ ಹೇಳಿಕೊಂಡು ಸರ್ಕಾರದತ್ತ ಮುಖ ಮಾಡಿದೆ. ಖಾಸಗಿ ಉದ್ಯೋಗಿಯೊಬ್ಬರು ಕ್ರೌಡ್ ಫಂಡ್ ಮೂಲಕ ದಾನಿಗಳಿಂದ 20 ಲಕ್ಷ ರೂ. ಸಂಗ್ರಹಿಸಿದ್ದರು. ಆದರೆ, ಸರ್ಕಾರದ ವತಿಯಿಂದ ಗ್ರಂಥಾಲಯ ನಿರ್ಮಿಸಿಕೊಡುವ ಭರವಸೆ ನೀಡಿದ್ದರಿಂದ ದಾನಿಗಳು ಹಣವನ್ನು ವಾಪಸ್ ಪಡೆದಿದ್ದಾರೆ.
ಕನ್ನಡ ಪ್ರೇಮಿ ಸೈಯದ್ ಇಸಾಕ್ ದೂರವಾಣಿ ಮೂಲಕ 'ಈಟಿವಿ ಭಾರತ್' ಜೊತೆ ಮಾತನಾಡಿ, ಸರ್ಕಾರ ಆಶ್ವಾಸನೆ ನೀಡಿದ್ದರಿಂದ ಗ್ರಂಥಾಲಯಕ್ಕೆ ಮುಡಾ ನಿವೇಶನ ನೀಡಿದೆ. ಈಗ ಹಣ ಇಲ್ಲ ಎನ್ನುತ್ತಿದ್ದಾರೆ. ಶಾಸಕ ಜಮೀರ್ ಅಹ್ಮದ್ 2 ಲಕ್ಷ ರೂ, ಸಂಸದ ಪ್ರತಾಪ್ ಸಿಂಹ 50 ಸಾವಿರ ರೂ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ 25 ಸಾವಿರ ರೂ. ನೀಡಿದ್ದಾರೆ.
ಒಟ್ಟು 2.75 ಲಕ್ಷ ರೂ. ನನ್ನ ಖಾತೆಯಲ್ಲಿಟ್ಟಿದ್ದೇನೆ. ಟೆಂಡರ್ ಹಾಕಿಕೊಂಡು ಗ್ರಂಥಾಲಯ ನಿರ್ಮಿಸುವ ಆಲೋಚನೆ ಮಾಡಿದ್ದೆ. ಆದರೆ, ಅದಕ್ಕೆ ದಿನಕ್ಕೆ 50 ಸಾವಿರ ಖರ್ಚಾಗುತ್ತದೆ. ಗ್ರಂಥಾಲಯ ಕಟ್ಟಡ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿದ ದಿನ ನನ್ನ ಬಳಿ ಇರುವ ಹಣವನ್ನು ಗ್ರಂಥಾಲಯಕ್ಕೆ ನೀಡುತ್ತೇನೆ ಎಂದಿದ್ದಾರೆ.
ಗ್ರಂಥಾಲಯ ಬೆಂಕಿಗೆ ಆಹುತಿಯಾಗಿ ಆರು ತಿಂಗಳು ಕಳೆದಿದೆ. ಆದರೆ, ಸರ್ಕಾರ ಕ್ರಮವಹಿಸಲು ಮೀನಮೇಷ ಎಣಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ನಾನು ದಲಿತರ ಬಗ್ಗೆ ಎಲ್ಲಿಯೂ ಅವಹೇಳನಕಾರಿಯಾಗಿ ಮಾತನಾಡಿಲ್ಲ: ಸಿದ್ದರಾಮಯ್ಯ