ಮೈಸೂರು: ಒಬ್ಬ ವೆಂಟಿಲೇಟರ್ನಲ್ಲಿ ಸತ್ತರೆ ಮತ್ತೊಬ್ಬರಿಗೆ ಆ ವೆಂಟಿಲೇಟರ್ ಸಿಗುತ್ತದೆ, ಆ ಪರಿಸ್ಥಿತಿಯಲ್ಲಿ ಮೈಸೂರು ಜಿಲ್ಲೆ ಇದೆ. ಜನಸಾಮಾನ್ಯರಿಗೆ ಕೋವಿಡ್ ಚಿಕಿತ್ಸೆ ಸಿಗದೆ ಕಂಗಾಲಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಶಾಸಕ ಸಾರಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಶಾಸಕರು, ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ತಪ್ಪುತ್ತಿದ್ದು, ಜಿಲ್ಲೆಯ ಉಸ್ತುವಾರಿ ಸಚಿವರು ಇದರ ನಿಯಂತ್ರಣಕ್ಕೆ ಯಾವುದೇ ಸಿದ್ಧತೆ ಮಾಡಿಕೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ ಸಿಗದೆ ಜನರು ಸಾಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ದ್ರಾಕ್ಷಾಯಿಣಿ ಎಂಬ ಮಹಿಳೆಗೆ ವೆಂಟಿಲೇಟರ್ ಸಿಗದೆ ಸಾವನ್ನಪ್ಪಿದ್ದಾರೆ. ನಾನೇ ಡಿ.ಹೆಚ್.ಒ ಗೆ ವೆಂಟಿಲೇಟರ್ ಬೇಕೆಂದು 5 ಬಾರಿ ಕರೆ ಮಾಡಿದರೂ ಕೂಡ ಯಾವುದೇ ವ್ಯವಸ್ಥೆಯನ್ನು ಮಾಡದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆ. ಸರ್ಕಾರ ಜನರ ಜೀವಗಳ ಜತೆ ಚೆಲ್ಲಾಟವಾಡುತ್ತಿದೆ. ಜಿಲ್ಲಾಡಳಿತ ಸತ್ತು ಹೋಗಿದೆ ಎಂದು ನನಗೆ ಅನಿಸುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಬದುಕಿದ್ದಾರಾ? ಎಂದು ವಾಗ್ದಾಳಿ ನಡೆಸಿದರು.
ಇನ್ನೂ ಜಿಲ್ಲೆಯಲ್ಲಿ ರೆಮಿಡಿಸಿವಿರ್ ಕೊರತೆಯಿದ್ದು, ಸರ್ಕಾರ ಇದನ್ನು ಸರಿಯಾಗಿ ಸರಬರಾಜು ಮಾಡುತ್ತಿಲ್ಲ. ಇನ್ನೂ ಖಾಸಗಿ ಆಸ್ಪತ್ರೆಯಲ್ಲೂ ರೆಮಿಡಿಸಿವಿಯರ್ ಕೊರತೆ ಇದೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ. ಬಡವರ ಸ್ಥಿತಿ ಕಷ್ಟವಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ: ಬ್ಯಾರಿಕೇಡ್ ಹಾಕಿ ಎಲ್ಲಾ ವಾಹನ ತಪಾಸಣೆ ನಡೆಸುತ್ತಿರುವ ಪೊಲೀಸರು
ಜಿಲ್ಲೆಯಲ್ಲಿ ಒಟ್ಟು 150 ವೆಂಟಿಲೇಟರ್ ವ್ಯವಸ್ಥೆ ಇದೆ. ಕೆಲವು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕೂಡಲೇ ರಾಜ್ಯ ಸರ್ಕಾರ ಪರಿಸ್ಥಿತಿ ಸರಿಪಡಿಸಬೇಕು. ಇಲ್ಲದಿದ್ದರೆ ಮೈಸೂರಿನಲ್ಲಿ ಬೆಂಗಳೂರಿನ ಪರಿಸ್ಥಿತಿ ಉದ್ಭವವಾಗಲಿದೆ ಎಂದು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.