ಮೈಸೂರು: ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ಕೆಲ ಸಫಾರಿ ವಾಹನ ಸವಾರರು ವಿನಾ ಕಾರಣ ತೊಂದರೆ ನೀಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರು ವನ್ಯಮೃಗಗಳನ್ನು ನೋಡಲು ಸಫಾರಿಗೆ ತೆರಳುವುದು ಸಾಮಾನ್ಯ. ಆದರೆ ಸಫಾರಿ ವಾಹನ ಚಲಾಯಿಸುವ ಚಾಲಕರು ಕಾಡುಪ್ರಾಣಿಗಳನ್ನು ಪ್ರವಾಸಿಗರಿಗೆ ಹತ್ತಿರದಿಂದ ತೋರಿಸಲು ಚೇಷ್ಟೆ ಮಾಡುತ್ತಾರೆ. ಆಗ ಪ್ರಾಣಿಗಳು ಸಫಾರಿ ವಾಹನದ ಕಡೆ ನುಗ್ಗಿ ಬರುವುದು ತೊಂದರೆ ಮಾಡುವ ಸಾಧ್ಯತೆ ಇರುತ್ತದೆ. ಅಂತಹ ಘಟನೆಗಳ ಕುರಿತಾದ ವಿಡಿಯೋಗಳು ಬೆಳಕಿಗೆ ಬಂದಿವೆ.
ಕೆಲ ದಿನಗಳ ಹಿಂದೆ ಸಫಾರಿಗೆ ಹೋದಂತಹ ಸಮಯದಲ್ಲಿ ಪ್ರವಾಸಿಗರಿಗೆ ಆನೆಯೊಂದು ಕಾಣಿಸಿಕೊಂಡಿತ್ತು. ಈ ವೇಳೆ ಸಫಾರಿ ವಾಹನ ಚಾಲಕ ಆನೆಗೆ ಹತ್ತಿರ ಹೋಗಿ ಹೆದರಿಸಿದ್ದಾನೆ. ಇದರಿಂದ ಕೋಪಗೊಂಡ ಆನೆ ಹಿಂಬಾಲಿಸಿಕೊಂಡು ಬಂದಿದೆ. ಚಾಲಕರ ಇಂತಹ ನಡವಳಿಕೆಯಿಂದ ಪ್ರವಾಸಿಗರ ಪ್ರಾಣಕ್ಕೆ ತೊಂದರೆಯಾಗುವ ಸಾಧ್ಯತೆಯಿದ್ದು, ಕಾಡು ಪ್ರಾಣಿಗಳ ಜೊತೆ ಇಂತಹ ನಡವಳಿಕೆ ಸರಿಯಲ್ಲ. ವಾಹನ ಚಾಲಕರು ಇಂತಹ ಕೃತ್ಯಕ್ಕೆ ಕೈ ಹಾಕಬಾರದು. ಈ ಬಗ್ಗೆ ರೆಸಾರ್ಟ್ ಮಾಲೀಕರು ವನ್ಯಜೀವಿಗಳ ಹಾಗೂ ಪ್ರವಾಸಿಗರ ರಕ್ಷಣೆ ಕಡೆಗೆ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.
ರೆಸಾರ್ಟ್ಗಳ ಹಾವಳಿ:
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹಾಗೂ ಕಬಿನಿ ಹಿನ್ನೀರಿಗೆ ಹೊಂದಿಕೊಂಡಂತೆ ಅನೇಕ ಖಾಸಗಿ ರೆಸಾರ್ಟ್ಗಳಿವೆ. ಇದರಲ್ಲಿ ಒಂದು ರೆಸಾರ್ಟ್ ಸಫಾರಿ ನಡೆಸುತ್ತಿದೆ. ತಮ್ಮಲ್ಲಿಗೆ ಬಂದಂತಹ ಪ್ರವಾಸಿಗರನ್ನು ಸಫಾರಿಗೆ ಕರೆದುಕೊಂಡು ಹೋಗುತ್ತಾರೆ. ಈ ವೇಳೆ ವಾಹನ ಚಾಲಕರು ಪ್ರವಾಸಿಗರಿಗೆ ವನ್ಯ ಮೃಗಗಳನ್ನು ತೋರಿಸುವ ಆತುರಕ್ಕೆ ಬಿದ್ದು ಕೆಲವು ಸಲ ಅಪಾಯಕ್ಕೆ ಎಡೆಮಾಡಿ ಕೊಡುತ್ತಾರೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಸಫಾರಿ ವಾಹನಗಳಿಗೆ ಕೆಲವು ನಿರ್ಬಂಧ ಹಾಗೂ ಎಚ್ಚರಿಕೆ ನೀಡಿದರೆ ಆಗುವ ಅನಾಹುತಗಳನ್ನು ತಪ್ಪಿಸಬಹುದು ಎನ್ನುತ್ತಾರೆ ವನ್ಯಜೀವಿ ಛಾಯಾಗ್ರಾಹಕರು.
ಇದನ್ನೂ ಓದಿ: ಗೂಢಚಾರಿಕೆ: ಸಿದ್ದರಾಮಯ್ಯ ಪತ್ರ ಪರಿಶೀಲಿಸಲು ರಾಜ್ಯಕ್ಕೆ ಕೇಂದ್ರ ಗೃಹ ಇಲಾಖೆ ಸೂಚನೆ